ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ಹೈಕಮಾಂಡ್ ಮುಂದೆ ಮಾಡಿಕೊಂಡ ೫೦:೫೦ ಒಪ್ಪಂದದಂತೆ ಸಿದ್ಧರಾಮಯ್ಯ ಅವರು ರಾಜಿನಾಮೆ ಕೊಟ್ಟು ಡಿ.ಕೆ.ಶಿ. ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುತ್ತಾರೆ. ಇಲ್ಲದಿದ್ದರೆ ಡಿ.ಕೆ.ಶಿ.ಯವರು ಬಲವಂತವಾಗಿಯಾದರೂ ಕುರ್ಚಿಯನ್ನು ಎಳೆದುಕೊಳ್ಳುತ್ತಾರೆ. ಒಟ್ಟಿನಲ್ಲಿ ಡಿ.ಕೆ.ಶಿ. ಅಧಿಕಾರ ಪಡೆಯುವ ಆತುರದಲ್ಲಿದ್ದಾರೆ ಎಂದು ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಅರೇಲ್ತಡಿ ಇರುವೆರ್ ಉಳ್ಳಾಕುಲು ಮತ್ತು ಕೆಡೆಂಜೋಡಿತ್ತಾಯಿ ದೈವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ದೇವರಾಜ ಅರಸು ಅವರು ಅತಿ ಹೆಚ್ಚು ಅವಧಿ ಮುಖ್ಯಮಂತ್ರಿಗಳಾಗಿದ್ದವರು. ಅವರಿಗಿಂತ ಒಂದು ದಿನವಾದರೂ ಹೆಚ್ಚು ನಾನು ಅಧಿಕಾರದಲ್ಲಿರಬೇಕು ಮತ್ತು ಅನಂತರ ಸೀಟು ಬಿಟ್ಟು ಕೊಡುತ್ತೇನೆ ಎಂದು ಹೈಕಮಾಂಡ್ ಮುಂದೆ ಒಪ್ಪಂದ ರೀತಿಯಲ್ಲಿ ಮಾಡಿಕೊಂಡು ಡಿ.ಕೆ.ಶಿ. ಹಾಗೂ ಸಿದ್ಧರಾಮಯ್ಯ ಅಧಿಕಾರ ಹಂಚಿಕೊಂಡಿದ್ದಾರೆ ಎಂದು ಸಂಡೂರು ಉಪ ಚುನಾವಣೆ ಸಂದರ್ಭದಲ್ಲೇ ನಾನು ಹೇಳಿದ್ದೇನೆ ಎಂದು ರೆಡ್ಡಿ ಹೇಳಿದರು.
ಒಪ್ಪಂದಂತೆ ಈಗಿನಿಂದಲೇ ಒತ್ತಡದ ಮೂಲಕ ಬುನಾದಿ ಹಾಕುವುದನ್ನು ಡಿ.ಕೆ.ಶಿ. ಆರಂಭಿಸಿದ್ದಾರೆ. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಕ್ಕಿಂತ ಒಂದು ದಿನ ಹೆಚ್ಚು ಆದಾಗ ಸಿದ್ಧರಾಮಯ್ಯ ಅವರು ಡಿ.ಕೆ.ಶಿ.ಗೆ ಅಧಿಕಾರ ಬಿಟ್ಟು ಕೊಡುತ್ತಾರೆ ಎಂದು ಹೇಳಿದರು.
ರಾಜಕೀಯವಾಗಿ ಆರೋಪ ಮಾಡುವ ವ್ಯಕ್ತಿತ್ವ ನನ್ನದಲ್ಲ. ಒಬ್ಬ ಸಾಮಾನ್ಯ ಪ್ರಜೆಯಾಗಿ ನೋಡಿದಾಗಲೂ ಇಡೀ ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿರುವುದು ಕಾಣಿಸುತ್ತಿದೆ. ಕಲ್ಯಾಣ ಕರ್ನಾಟಕ್ಕಾದರೂ ವಿಶೇಷ ಅನುದಾನ ಎಂದು ಸಿಗುತ್ತಿದೆ. ಆದರೆ ಉಳಿದ ಶಾಸಕರುಗಳಿಗೆ ಯಾವುದೇ ಅನುದಾನ ಸಿಗುತ್ತಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಗ್ಯಾರಂಟಿಯನ್ನೂ ಕೊಡುತ್ತಿಲ್ಲ, ವಿಪರೀತ ಬೆಲೆ ಏರಿಕೆ ಮಾಡಲಾಗುತ್ತಿದೆ. ಫೆಬ್ರವರಿ ತಿಂಗಳಿನಿಂದ ಗೃಹಲಕ್ಷ್ಮೀ ಹಣ ನೀಡಿಲ್ಲ. ಒಂದು ಚುನಾವಣೆ ಬಂದರೆ ಓಟಿಗಾಗಿ ಒಮ್ಮೆ ಹಣ ಬಿಡುಗಡೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನವರ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಇದನ್ನೆಲ್ಲಾ ನೋಡಿರುವ ಜನತೆ ಭಾರತೀಯ ಜನತಾ ಪಕ್ಷಕ್ಕೆ ಮತ ಚಲಾಯಿಸಲು ಎದುರು ನೋಡುತ್ತಿದ್ದಾರೆ. ಮುಂದೆ ಬಹು ದೊಡ್ಡ ಮೆಜಾರಿಟಿಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಬಹುಮತದ ಸರಕಾರ ರಚಿಸುತ್ತೇವೆ. ರಾಜ್ಯಾಧ್ಯಕ್ಷ ಸ್ಥಾನದ ಮುಂದುವರಿಕೆ, ಗೊಂದಲದ ಕುರಿತೂ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಜಗತ್ತಿನ ಎಲ್ಲಾ ರಾಶಿಗಳಲ್ಲಿ ಮಾನವ ಜನ್ಮ ಅತ್ಯಂತ ಉತ್ತಮವಾದುದು. ದೈವ, ಭಗವಂತನನ್ನು ನಂಬಿಯೇ ನಾವು ಜೀವನ ಮಾಡಬೇಕು. ವಿಧಿ ಎನ್ನುವುದು ಭಗವಂತ ನಮ್ಮ ಹಣೆಬರಹದಲ್ಲಿ ಬರೆದಂತೆಯೇ ಆಗುತ್ತದೆ. ದೈವದ ಮೇಲೆ ನನಗೆ ಮೊದಲಿನಿಂದಲೂ ನಂಬಿಕೆ ಇತ್ತು. ನಿರ್ಗತಿಕರು, ಅಸಹಾಯಕರಿಗೆ ನೆರವಾಗುವುದರೊಂದಿಗೆ ನಮ್ಮ ಬದುಕು ಸಾಗಬೇಕು ಎನ್ನುವುದನ್ನು ನಾನು ನಂಬಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿದರು.
ಈ ಸಂದರ್ಭ ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು, ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.