ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ ಎಂದು ಹೇಳಿದ್ದ ಸಿದ್ದರಾಮಯ್ಯ ಆರೋಪಕ್ಕೆ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.
ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಸದನದಲ್ಲಿ ಏಕೆ ಪ್ರಶ್ನಿಸಲಿಲ್ಲ. ಅಂದು ಪ್ರಯೋಜನ ಪಡೆದವರೇ ಇಂದು ಟೀಕೆ ಮಾಡುತ್ತಿದ್ದಾರೆ. ನಮ್ಮ ಅಧಿಕಾರವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳೇ ಇಂದಿಗೂ ನಡೆಯುತ್ತಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬಿಡಿಗಾಸು ಅನುದಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್‌ನ ಶಾಸಕರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಿಂತಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಶೆಟ್ಟರ್ ದೂರಿದರು.
ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮಾಡಿದ್ದ ಸಾಲವನ್ನು ಬಡ್ಡಿ ಸಮೇತವಾಗಿ ತೀರಿಸಿ ದೇಶವನ್ನು ಉತ್ತಮ ಸ್ಥಿತಿಗೆ ತಂದವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಜನರು ಅಧಿಕಾರ ಕೊಟ್ಟಾಗ, ಉತ್ತಮವಾಗಿ ಕೆಲಸ ಮಾಡಬೇಕೇ ಹೊರತು, ಕೊಂಕು ಮಾತನಾಡಬಾರರು. ಆರ್ಥಿಕ ಪರಿಸ್ಥಿತಿ ಸುಧಾರಿಸಲು ಆಗದಿದ್ದರೆ, ಅಧಿಕಾರ ಬಿಟ್ಟು ಹೋಗಿ. ನಾವು ಸುಧಾರಿಸುತ್ತೇವೆ’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.