ಹೊಸದಿಗಂತ ಚಿತ್ರದುರ್ಗ:
ರಾಜ್ಯಪಾಲರು ಸರ್ಕಾರದ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದದಿರುವುದೇ ಈಗಿನ ಎಲ್ಲಾ ಗೊಂದಲಗಳಿಗೆ ಮೂಲ ಕಾರಣ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ರಾಜ್ಯಪಾಲರ ವಿರುದ್ಧದ ‘ಗೂಂಡಾ ವರ್ತನೆ’ ಎಂಬ ಆರೋಪಗಳನ್ನು ತಳ್ಳಿಹಾಕಿದರು. ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳಿದ್ದರೂ ರಾಜ್ಯಪಾಲರು ಪೂರ್ಣ ಭಾಷಣ ಓದಿದ ಇತಿಹಾಸವಿದೆ. ಆದರೆ ಈ ಬಾರಿ ಅವರು ಅರ್ಧಕ್ಕೆ ನಿಲ್ಲಿಸಿರುವುದು ಸಮಸ್ಯೆಯಾಗಿದೆ. ಈ ಬಗ್ಗೆ ಸದನದಲ್ಲಿ ಚರ್ಚೆಯಾಗುತ್ತಿದ್ದು, ಸರ್ಕಾರ ಸೂಕ್ತ ಉತ್ತರ ನೀಡಲಿದೆ ಹಾಗೂ ಕಾನೂನು ಹೋರಾಟದ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದರು.
“ಸರ್ಕಾರ ಕೊಟ್ಟಿದ್ದನ್ನು ರಾಜ್ಯಪಾಲರು ಓದಬೇಕೆಂದೇನೂ ಇಲ್ಲ” ಎಂಬ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ರಾಜ್ಯಪಾಲರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಸಂಪ್ರದಾಯದಂತೆ ಸರ್ಕಾರದ ಟಿಪ್ಪಣಿಯನ್ನು ಓದುವುದು ಅವರ ಕರ್ತವ್ಯ. ಈ ಹಿಂದೆ ಇದೇ ನಾಯಕರು ರಾಜ್ಯಪಾಲರ ಭಾಷಣವನ್ನು ಸಮರ್ಥಿಸಿಕೊಂಡಿದ್ದರು, ಈಗ ಯಾಕೆ ಬದಲಾಗಿದ್ದಾರೆ?” ಎಂದು ಪ್ರಶ್ನಿಸಿದರು.
ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ “ಸಿಎಂ ಬದಲಾವಣೆ” ಹೇಳಿಕೆಯನ್ನು ಲೇವಡಿ ಮಾಡಿದ ಸತೀಶ್ ಜಾರಕಿಹೊಳಿ, “ಸಂಕ್ರಾಂತಿ ಕಳೆದರೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದಿದ್ದರು. ಈಗ ಸಂಕ್ರಾಂತಿಯೂ ಮುಗಿಯಿತು. ಸಿಎಂ ಬದಲಾವಣೆ ವಿಚಾರ ದೆಹಲಿ ಮಟ್ಟದ್ದು, ಅದನ್ನು ಇಲ್ಲಿ ಚರ್ಚಿಸಿ ಪ್ರಯೋಜನವಿಲ್ಲ. ಹೈಕಮಾಂಡ್ ಇದಕ್ಕೆ ಉತ್ತರ ನೀಡಲಿದೆ” ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ‘ಗೋ ಬ್ಯಾಕ್ ಗವರ್ನರ್’ ಎಂಬುದು ಯಾರೋ ಒಬ್ಬರ ವೈಯಕ್ತಿಕ ಹೇಳಿಕೆಯಾಗಿರಬಹುದೇ ಹೊರತು, ಯಾರೂ ರಾಜ್ಯಪಾಲರಿಗೆ ಹೋಗುವಂತೆ ಒತ್ತಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.


