October 16, 2026
Friday, October 16, 2026
spot_img

ಗ್ಯಾರಂಟಿ ಅಷ್ಟೊಂದು ಪವರ್‌ಫುಲ್ ಆಗಿದ್ರೆ, ಐದು ದಿನ ಪ್ರಚಾರ ಯಾಕೆ ಸಿದ್ದರಾಮಯ್ಯನವರೇ? HDK ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈತ್ರಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ಕೈಗೊಳ್ಳಲು ಬಾಗಲಕೋಟೆಗೆ ಆಗಮಿಸಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀಕ್ಷ್ಣವಾದ ಪ್ರಶ್ನೆಗಳನ್ನು ಎಸೆದರು.

“ನಿಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಅಷ್ಟೊಂದು ಇಷ್ಟವಾಗಿದ್ದರೆ, ನೀವು ಬಾಗಲಕೋಟೆಯಲ್ಲಿ ಐದು ದಿನಗಳ ಕಾಲ ಬೀಡುಬಿಟ್ಟು ಪ್ರಚಾರ ಮಾಡುವ ಅನಿವಾರ್ಯತೆ ಏನಿತ್ತು?” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಗ್ಯಾರಂಟಿಗಳ ಮೇಲೆ ಸರ್ಕಾರಕ್ಕೆ ಅಷ್ಟು ನಂಬಿಕೆ ಇದ್ದರೆ, ಇಡೀ ಸಚಿವ ಸಂಪುಟವೇ ಬಂದು ಪ್ರಚಾರ ಮಾಡುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಅವರು ವ್ಯಂಗ್ಯವಾಡಿದರು.

2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಕೇವಲ ಅಲ್ಪ ಮತಗಳ ಅಂತರದಿಂದ ಗೆದ್ದಿದ್ದನ್ನು ನೆನಪಿಸಿದ ಕುಮಾರಸ್ವಾಮಿ, “ಗೆದ್ದ ನಂತರ ಬಾದಾಮಿಯನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಿರಿ. ಆದರೆ ಅಲ್ಲಿನ ಜನರಿಗೆ ಕೊಟ್ಟ ಮಾತು ಏನಾಯಿತು? ಬಾದಾಮಿಯಲ್ಲಿ ಯಾವುದೇ ಕೆಲಸ ಮಾಡದೆ ಕೇವಲ ಭರವಸೆಗಳನ್ನು ಮಾತ್ರ ನೀಡಿದ್ದೀರಿ” ಎಂದು ನೇರವಾಗಿ ಆರೋಪಿಸಿದರು.

Must Read