ಬಜೆಟ್ ನಲ್ಲಿ ಆಸ್ಪತ್ರೆಗೆ ಹಣ ನೀಡದಿದ್ರೆ ಉಸ್ತುವಾರಿ ಮಂತ್ರಿ ರಾಜೀನಾಮೆ ನೀಡಲಿ: ಅನಂತಮೂರ್ತಿ ಹೆಗಡೆ

ಹೊಸದಿಗಂತ ವರದಿ,ಶಿರಸಿ:

ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಕುಮಟಾದಲ್ಲಿ ಈ ಹಿಂದೆ ಘೋಷಣೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಘೋಷಣೆ ಮಾಡದಿದ್ದಲ್ಲಿ ಉಸ್ತುವಾರಿ ಸಚಿವ ಮಂಕಾಳ‌ ವೈದ್ಯ ಸಂಪೂರ್ಣ ಜವಾಬ್ದಾರಿ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಒತ್ತಾಯ ಮಾಡಿದ್ದಾರೆ.

ನಾವು ಕಳೆದ ಹಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಹಲವಾರು ಹೋರಾಟಗಳನ್ನು ಮಾಡಿದ್ದು, ಜಿಲ್ಲೆಯ ಜನರು ಕೂಡಾ ಸೋಶಿಯಲ್ ಮೀಡಿಯಾ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆದರೂ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಯಾವುದೇ ತರಹದ ಪ್ರಕ್ರಿಯೆ ನಡೆಯದಿರುವುದು ಶೋಚನೀಯ ಸಂಗತಿ.ಕಳೆದ ಕೆಲ ದಿನಗಳ ಹಿಂದೆ ಕುಮಟಾದಿಂದ ಭಟ್ಕಳದ ತಮ್ಮ ಕಚೇರಿಯವರೆಗೆ ಪಾದಯಾತ್ರೆಯಲ್ಲಿ ನೂರಾರು ಜನರು ಬಂದು ತಮ್ಮ ಕಚೇರಿಯ ಸಿಬ್ಬಂದಿಗೆ ಮನವಿ ನೀಡಿದ್ದೇವೆ. ಈ ಬಗ್ಗೆ ತಾವು ಒಂದೇ ಒಂದು ಹೇಳಿಕೆ ನೀಡಿಲ್ಲ. ಇದು ನಿಮಗೆ ನಿರ್ಲಕ್ಷದ ವಿಷಯವೇ ಎಂದು ಪ್ರಶ್ನಿಸಿದ್ದಾರೆ.

ತಾವು ಈ ಹಿಂದೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಸ್ವಂತ ಖರ್ಚಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಜನರಿಗೆ ಹೇಳಿದ್ದೀರಿ, ತಾವು ಕ್ಷೇತ್ರದ ಶಾಸಕರಾಗಿ ಈಗ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದಾಗಿದೆ, ತಮ್ಮ ಸ್ವಂತ ಖರ್ಚಿನಲ್ಲಿ ಹೋಗಲಿ ಸರ್ಕಾರದಿಂದ ಮಂಜೂರಾದ ಆಸ್ಪತ್ರೆಗೆ ಹಣ ಬಿಡುಗಡೆ ಮಾಡಿಸಲು ತಾವು ಯಾವುದೇ ರೀತಿಯಲ್ಲೂ ಪ್ರಯತ್ನ ಮಾಡದಿರುವುದು ಶೋಚನೀಯ ಸಂಗತಿ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಒಂದು ಸಭೆ ನಡೆಸಿಲ್ಲ ಎಂದಿದ್ದಾರೆ.

ನಿನ್ನೆ ಭಟ್ಕಳದಲ್ಲಿ ನಡೆದ ಅಪಘಾತ ದಲ್ಲಿ ನಾಲ್ವರು ಗಂಭೀರ ಗಾಯಗೊಂಡ ಅವರನ್ನು ಪಕ್ಕದ ಜಿಲ್ಲೆಯ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲಾಗಿದೆ. ನಮ್ಮಲ್ಲೇ ಆಸ್ಪತ್ರೆ ಇದ್ದರೆ ಪಕ್ಕದ ಜಿಲ್ಲೆಗೆ ಹೋಗುವ ಅವಶ್ಯಕತೆ ಇರುತ್ತಿತ್ತೇ. ಆಸ್ಪತ್ರೆ ನಿರ್ಮಾಣ ಆಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಮುಂದಿನ ದಿನಗಳಲ್ಲಿ ತಮ್ಮ‌ ರಾಜೀನಾಮೆಗೆ ಒತ್ತಾಯಿಸುವುದರೊಂದಿಗೆ ತಮ್ಮ‌ ಕಚೇರಿ ಹಾಗೂ ಬೆಂಗಳೂರಿನ ವಿಧಾನಸೌಧ ಎದುರು ಗಾಂಧಿ ಪ್ರತಿಮೆಯ ಬಳಿ ಜಿಲ್ಲೆ ಜನರು, ಯುವಕರೊಂದಿಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!