ಹೊಸದಿಗಂತ ಡಿಜಿಟಲ್ ಡೆಸ್ಕ್:
I.N.D.I.A ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
I.N.D.I.A ಮೈತ್ರಿ ಸರ್ಕಾರ ರೈತ ಸಮುದಾಯದ ಧ್ವನಿಯಾಗಲಿದೆ. ನಾವು ರೈತರನ್ನು ರಕ್ಷಿಸುವ ಮತ್ತು ಕೃಷಿಯನ್ನು ಜಿಎಸ್‌ಟಿಗೆ ಒಳಪಡಿಸುವುದನ್ನು ತಡೆಯುವ ಕಾನೂನುಗಳನ್ನು ಜಾರಿಗೆ ತರುತ್ತೇವೆ. ನಾವು ಬೆಳೆ ವಿಮೆ ವ್ಯವಸ್ಥೆಯ ಸ್ವರೂಪವನ್ನು ಸಹ ಬದಲಾಯಿಸುತ್ತೇವೆ ಎಂದು ರಾಹುಲ್ ಭರವಸೆ ನೀಡಿದರು.
ಭಾರತ್ ಜೋಡೋ ನ್ಯಾಯ ಯಾತ್ರೆಯ ಅಂಗವಾಗಿ ಗುರುವಾರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಚಂದವಾಡದಲ್ಲಿ ರೈತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರದ ಬಾಗಿಲು ರೈತರಿಗೆ ಯಾವಾಗಲೂ ತೆರೆದಿರುತ್ತದೆ. ಅವರ ಸಾಲ ಮನ್ನಾ ಮಾಡುತ್ತೇವೆ. ರಫ್ತು ಮತ್ತು ಆಮದು ನೀತಿಗಳನ್ನು ರೂಪಿಸುವಾಗ ನಾವು ರೈತರಿಗೆ ಬೆಲೆ ರಕ್ಷಣೆ ನೀಡುತ್ತೇವೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಪಡಿಸಲು ನಾವು ಸ್ವಾಮಿನಾಥನ್ ಸಮಿತಿಯ ವರದಿಯನ್ನು ಜಾರಿಗೊಳಿಸುತ್ತೇವೆ ಎಂದು ಅವರು ಹೇಳಿದರು.