‘1947 ರಲ್ಲೇ ಮುಜಾಹಿದ್ದೀನ್​​ಗಳನ್ನು ಮಟ್ಟ ಹಾಕಿದ್ದರೆ, ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:

‘1947 ರಲ್ಲೇ ಮುಜಾಹಿದ್ದೀನ್​​ಗಳನ್ನು ಮಟ್ಟ ಹಾಕಿದ್ದರೆ, ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಪ್ರವಾಸದ ಎರಡನೇ ದಿನವಾದ ಇಂದು ಗಾಂಧಿನಗರದಲ್ಲಿ ಮೆಗಾ ರೋಡ್ ಶೋ ನಡೆಸಿದರು. ಸಾವಿರಾರು ಜನರು ಪ್ರಧಾನಿ ಅವರ ಮೇಲೆ ಪುಷ್ಪವೃಷ್ಟಿ ಸುರಿಸುವ ಮೂಲಕ ಸ್ವಾಗತಿಸಿದರು.

ರೋಡ್​ ಶೋ ನಡೆದ ಹಾದಿ ಉದ್ದಕ್ಕೂ ತ್ರಿವರ್ಣ ಧ್ವಜಗಳನ್ನು ಹಿಡಿದು ಜನರು ಭಾರತೀಯ ಸೇನೆಗೆ ಗೌರವ ಸಲ್ಲಿಸಿದರು. ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಸೋಮವಾರ ವಡೋದರಾ, ಭುಜ್ ಮತ್ತು ಅಹಮದಾಬಾದ್‌ನಲ್ಲಿ ರೋಡ್ ಶೋ ನಡೆಸಿದ್ದರು.

ನಂತರ ಗಾಂಧಿನಗರದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಆಪರೇಷನ್​ ಸಿಂಧೂರ ಕಾರ್ಯಾಚರಣೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಅವರು, “1947 ರಲ್ಲಿ ಕಾಶ್ಮೀರಕ್ಕೆ ನುಗ್ಗಿದ್ದ ಮುಜಾಹಿದ್ದೀನ್​​ಗಳನ್ನು ಕೊಂದಿದ್ದರೆ ಈಗ ನಾವು ಇಂತಹ ದುಃಸ್ಥಿತಿಯನ್ನು ಎದುರಿಸುತ್ತಿರಲಿಲ್ಲ” ಎಂದು ಹೇಳಿದರು.

“ಅಂದು ಏನಾದರೂ ಮುಜಾಹಿದ್ದೀನ್​ಗಳನ್ನು ಮಟ್ಟಹಾಕಿದ್ದರೆ, ಇಂದು ನಾವು ಈ ಸ್ಥಿತಿ ಎದುರಿಸುವ ಅಗತ್ಯವೇ ಇರುತ್ತಿರಲಿಲ್ಲ. 1947 ರಲ್ಲಿ ಸರ್ದಾರ್​ ವಲ್ಲಭಬಾಯಿ ಪಟೇಲ್​ ಅವರು ಪಾಕ್​ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಬಯಸಿದ್ದರು. ಪಿಒಕೆ ಮರಳಿ ಮರು ವಶವಾಗುವವರೆಗೂ ಸೇನಾ ಕಾರ್ಯಾಚರಣೆ ನಿಲ್ಲಿಸಬಾರದು ಅವರು ನಿರ್ಧರಿಸಿದ್ದರು” ಎಂದರು.

“75 ವರ್ಷಗಳಿಂದ ನಾವು ಒಂದಲ್ಲಾ ಒಂದು ತೊಂದರೆಯನ್ನು ಅನುಭವಿಸುತ್ತಲೇ ಇದ್ದೇವೆ. ಪಹಲ್ಗಾಮ್​ನಲ್ಲಿ ನಡೆದಿದ್ದು, ಆ ದಾಳಿಯ ವಿಕೃತ ರೂಪವಷ್ಟೇ. ಪ್ರತಿ ಸಲವೂ ಪಾಕಿಸ್ತಾನದ ಸೇನೆಯ ವಿಫಲ ಯತ್ನವನ್ನು ನಮ್ಮ ಯೋಧರು ಹಿಮ್ಮೆಟ್ಟಿಸಿದ್ದಾರೆ. ಭಾರತವನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂಬುದು ಈಗ ಆ ದೇಶಕ್ಕೆ ಮನವರಿಕೆಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!