January16, 2026
Friday, January 16, 2026
spot_img

ಪ್ರಶ್ನೆ ಪತ್ರಿಕೆ ಲೀಕ್ ಆದ್ರೆ ಕಾಲೇಜ್​ ಕಥೆ ಮುಗೀತು: ಶಿಕ್ಷಣ ಇಲಾಖೆಯಿಂದ ಖಡಕ್ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಶಿಕ್ಷಣ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆ ಪತ್ರಿಕೆಗಳು ಹರಿದಾಡುತ್ತಿರುವ ಘಟನೆಗಳು ಪದೇ ಪದೇ ವರದಿಯಾಗುತ್ತಿವೆ. ವಿಶೇಷವಾಗಿ ದ್ವಿತೀಯ ಪಿಯುಸಿ ಪ್ರಿಪರೇಟರಿ ಪರೀಕ್ಷೆಗಳಲ್ಲಿ ಈ ರೀತಿಯ ಅಕ್ರಮಗಳು ಪುನರಾವರ್ತನೆಯಾಗುತ್ತಿರುವ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ಪರೀಕ್ಷೆ ಆರಂಭಕ್ಕೂ ಮುನ್ನವೇ ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಕಂಡುಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಲೀಕ್ ಆದರೆ ಸಂಬಂಧಪಟ್ಟ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅನುದಾನಿತ ಕಾಲೇಜುಗಳ ವಿಷಯದಲ್ಲಿ ಅನುದಾನ ಕಡಿತ ಅಥವಾ ಸಂಪೂರ್ಣ ಸ್ಥಗಿತಗೊಳಿಸುವ ಶಿಫಾರಸು ಮಾಡಲಾಗುತ್ತದೆ. ಅನುದಾನ ರಹಿತ ಕಾಲೇಜುಗಳಲ್ಲಿ ಸೋರಿಕೆ ನಡೆದರೆ ಮಾನ್ಯತೆ ಶಾಶ್ವತವಾಗಿ ರದ್ದುಪಡಿಸುವ ಸಾಧ್ಯತೆಯೂ ಇದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೊಂಡರೆ ವಿದ್ಯಾರ್ಥಿಗಳ ಮೇಲೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ನೋಡಲ್ ಕೇಂದ್ರಗಳಿಂದಲೇ ಸೋರಿಕೆ ನಡೆದರೆ ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಇತ್ತೀಚೆಗೆ ಶಿವಮೊಗ್ಗ, ತುಮಕೂರು, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Must Read

error: Content is protected !!