ಹೊಸದಿಗಂತ ವರದಿ, ಶಿವಮೊಗ್ಗ :
ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಅವರ ಮೇಲೆ 16 ಕೇಸು ಈಗಲೂ ಇದ್ದರೆ ನಾನು ರಾಜ್ಯದ ಜನತೆಯ ಕ್ಷಮೆ ಕೇಳುತ್ತೇನೆ. ಇಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಮಂತ್ರಿ ಪರಮೇಶ್ವರ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸುಗಳಿವೆ. ಈ ಮಣ್ಣಿನ ಕಾನೂನಿಗೆ ಬೆಂಬಲ ಕೊಡಬಾರದೇ? ಅಪರಾಧಿಗಳ ಪರವಾಗಿ ಬಿಜೆಪಿಯವರು ನಿಲ್ಲುತ್ತಾರೆ ಎಂದೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡಬಡಿಸಿದ್ದಾರೆ. ಆದರೆ ಶ್ರೀಕಾಂತ ಪೂಜಾರಿ ಅವರ ಮೇಲಿರುವ 15 ಕೇಸುಗಳು ಖುಲಾಸೆ ಆಗಿವೆ. ಇರುವುದು ಒಂದೇ ಕೇಸು. ಅದಕ್ಕೂ ಕೂಡ ಎಫ್‌ಐಆರ್ ಆಗಿಲ್ಲ. ಯಾರೂ ದೂರು ಕೂಡ ಕೊಟ್ಟಿಲ್ಲ. ಹೀಗಿದ್ದರೂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಅವರು ಸಿದ್ದರಾಮಯ್ಯ ಅಲ್ಲ, ಸುಳ್ಳು ರಾಮಯ್ಯ ಎಂದು ಲೇವಡಿ ಮಾಡಿದರು.
ಹಳೆಯ ಪ್ರಕರಣ ಇಟ್ಟುಕೊಂಡು ಶ್ರೀಕಾಂತ್ ಪೂಜಾರಿಯವರ ಮೇಲೆ ಮತ್ತೆ ಕೇಸು ದಾಖಲಿಸಿರುವ ಹಿಂದೆ ಷಡ್ಯಂತ್ರ ನಡೆದಿದೆ. ಮುಖ್ಯಮಂತ್ರಿ ಅಥವಾ ಗೃಹಮಂತ್ರಿಗಳು ಪೊಲೀಸ್ ಇಲಾಖೆಯನ್ನು ಮುಂದಿಟ್ಟುಕೊಂಡು ಈ ಕೇಸು ದಾಖಲಿಸಿರಬಹುದು. ಅಥವಾ ಹುಬ್ಬಳ್ಳಿ ಪೊಲೀಸರು ದಿಕ್ಕು ತಪ್ಪಿಸಿರಬಹುದು. ವಿನಾ ಕಾರಣ ಕೇಸು ದಾಖಲಿಸಿಕೊಂಡ ಪೊಲೀಸರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.