ನೆಲ್ಲಿಕಾಯಿ ತೊಕ್ಕು, ಗಂಜಿ ಇದ್ದರೆ ವ್ಹಾವ್…ಅದೇನು ಖುಷಿಗೊತ್ತೇ… ಬೆಳ್ತಿಗೆ ಪ್ರಿಯರಾದರೆ ಬೆಳ್ತಿಗೆ ಅಕ್ಕಿ ಅನ್ನ, ಗಟ್ಟಿ ಮೊಸರು ನೆಲ್ಲಿಕಾಯಿ ತೊಕ್ಕು ಇದ್ದರೆ ಸಾಕು…ಅನ್ನ ಮತ್ತಷ್ಟು ಹೊಟ್ಟೆಗೆ ಸೇರುತ್ತದೆ. ಇಂತಹ ರುಚಿ ರುಚಿಯಾದ ಆರೋಗ್ಯಕ್ಕೂ ಉತ್ತಮವಾದ ತೊಕ್ಕು ಮಾಡುವುದು ಹೇಗೆ ಗೊತ್ತೇ?
ಬೇಕಾಗುವ ಸಾಮಾಗ್ರಿಗಳು: ಒಂದು ಕೆಜಿ ಚೆನ್ನಾಗಿ ಬೆಳೆದ ನೆಲ್ಲಿಕಾಯಿ, 50ಗ್ರಾಂ ಒಣ ಮೆಣಸಿನ ಕಾಯಿ, 50ಗ್ರಾಂ ಹಸಿಮೆಣಸಿನ ಕಾಯಿ, ಒಂದು ಚಮಚ ಅರಶಿನ ಹುಡಿ, ಸ್ವಲ್ಪ ಹಿಂಗು, ಒಂದು ಚಮಚ ಮೆಂತ್ಯೆ, ಅಡುಗೆ ಎಣ್ಣೆ, ಉಪ್ಪು.
ಮಾಡುವ ವಿಧಾನ: ಚೆನ್ನಾಗಿ ತೊಳೆದ ನೆಲ್ಲಿಕಾಯಿಗಳನ್ನು ನೀರಿನಲ್ಲಿ ಬೇಯಿಸಿ. ನಂತರ ನೆಲ್ಲಿಕಾಯಿಯೊಳಗಿರುವ ಬೀಜಗಳನ್ನು ಬೇರ್ಪಡಿಸಿ. ಒಣ ಮೆಣಸಿನ ಕಾಯಿ, ಹಸಿಮೆಣಸಿನ ಕಾಯಿ, ಅರಶಿನ ಹುಡಿ,ಹಿಂಗು, ಒಂದು ಚಮಚ ಮೆಂತ್ಯೆಯನ್ನು ಸ್ವಲ್ಪ ಶುದ್ಧ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಹುರಿಯಿರಿ. ಈ ಮಸಾಲೆಯನ್ನು ಬೆಂದ ನೆಲ್ಲಿಕಾಯಿಯೊಂದಿಗೆ ಸೇರಿಸಿ ಅರೆಯಿರಿ. ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿಕೊಳ್ಳಿ. ಸ್ವಲ್ಪ ಎಣ್ಣೆಯನ್ನು ಬಾಣಲೆಯಲ್ಲಿ ಚೆನ್ನಾಗಿ ಕಾಯಿಸಿ ಮಿಶ್ರಣಕ್ಕೆ ಸೇರಿಸಿ ಸರಿಯಾಗಿ ಮಿಶ್ರಮಾಡಿ. ಒಂದು ಜಾಡಿಯಲ್ಲಿ ಈ ತೊಕ್ಕನ್ನು ಶೇಖರಿಸಿಟ್ಟುಕೊಳ್ಳಿ. ರುಚಿ ರುಚಿಯಾದ ನೆಲ್ಲಿಕಾಯಿ ತೊಕ್ಕು ರೆಡಿ.