ದೇವಿಗೆ ನೈವೇದ್ಯ ಅರ್ಪಿಸುವುದು ಪವಿತ್ರ ಕಾರ್ಯ. ದೇವಿಯ ಪ್ರೀತಿಯ ಆಹಾರವೆಂದರೆ ಅನ್ನ ಮತ್ತು ತೆಂಗಿನಕಾಯಿ. ಈ ಎರಡು ಸಾಂಪ್ರದಾಯಿಕ ಪದಾರ್ಥಗಳನ್ನು ಸೇರಿಸಿ ಮಾಡುವ ತೆಂಗಿನಕಾಯಿ ಅನ್ನ ಹೆಚ್ಚು ಶ್ರೇಷ್ಠವಾದ, ರುಚಿಕರ ಹಾಗೂ ಪವಿತ್ರ ನೈವೇದ್ಯವನ್ನಾಗಿ ಪರಿಗಣಿಸಲಾಗುತ್ತದೆ. ಇಲ್ಲಿದೆ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ ಪಾಕವಿಧಾನ.
ಬೇಕಾಗುವ ಸಾಮಗ್ರಿಗಳು:
ಅನ್ನ – 2 ಕಪ್
ತೆಂಗಿನಕಾಯಿ ತುರಿ – 1 ಕಪ್
ತುಪ್ಪ – 1 ಟೇಬಲ್‌ಸ್ಪೂನ್
ಎಣ್ಣೆ – 1 ಟೇಬಲ್‌ಸ್ಪೂನ್
ಕಡಲೆಬೇಳೆ – ಅರ್ಧ ಚಮಚ
ಉದ್ದಿನಬೇಳೆ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಸಾಸಿವೆ – ಅರ್ಧ ಚಮಚ
ಒಣಮೆಣಸು – 3 ರಿಂದ 4
ಕರಿಬೇವು – ಸ್ವಲ್ಪ
ಇಂಗು (ಹಿಂಗೆ) – ಒಂದು ಚಿಟಿಕೆ
ಶುಂಠಿ (ತುರಿದದು) – 1 ಟೀಸ್ಪೂನ್
ಹಸಿಮೆಣಸು – 1 ಅಥವಾ 2 (ನಿಮ್ಮ ರುಚಿಗೆ ತಕ್ಕಂತೆ)
ಹುರಿದ ಶೇಂಗಾ – 2 ಟೇಬಲ್‌ಸ್ಪೂನ್
ಗೋಡಂಬಿ – 1 ಟೇಬಲ್‌ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲಿಗೆ ಬಾಣಲೆಯಲ್ಲಿ ಒಂದು ಟೇಬಲ್‌ಸ್ಪೂನ್ ತುಪ್ಪ ಮತ್ತು ಒಂದು ಟೇಬಲ್‌ಸ್ಪೂನ್ ಎಣ್ಣೆ ಹಾಕಿ ನಂತರ ಅರ್ಧ ಚಮಚ ಕಡಲೆಬೇಳೆ, ಅರ್ಧ ಚಮಚ ಉದ್ದಿನಬೇಳೆ, ಅರ್ಧ ಚಮಚ ಜೀರಿಗೆ ಮತ್ತು ಅರ್ಧ ಚಮಚ ಸಾಸಿವೆ ಹಾಕಿ ಒಣಮೆಣಸು (3-4) ಹಾಗೂ ಸ್ವಲ್ಪ ಕರಿಬೇವು ಸೇರಿಸಿ ಚೆನ್ನಾಗಿ ಹುರಿಯಿರಿ.
ಇವುಗಳು ಹುರಿದ ಬಳಿಕ ಸ್ವಲ್ಪ ಇಂಗು ಸೇರಿಸಿ, ಹುರಿದ ಮೇಲೆ ಚಿಕ್ಕದಾಗಿ ತುರಿದ ಶುಂಠಿ ಹಾಗೂ ಕತ್ತರಿಸಿದ ಹಸಿಮೆಣಸು ಸೇರಿಸಿ ಬಾಡಿಸಿ. ನಂತರ ಮುಂಚಿತವಾಗಿ ಹುರಿದು ಇಟ್ಟುಕೊಂಡ ಶೇಂಗಾ ಹಾಗೂ ಸ್ವಲ್ಪ ಗೋಡಂಬಿ ಹಾಕಿ ಹುರಿಯಿರಿ. ಇವುಗಳ ಮೇಲೆ ಉಪ್ಪು ಸೇರಿಸಿ, ನಂತರ ಒಂದು ಕಪ್ ತುರಿದ ತೆಂಗಿನಕಾಯಿ ಸೇರಿಸಿ ಒಂದು ನಿಮಿಷದಷ್ಟು ಹುರಿಯಿರಿ.
ಇನ್ನಷ್ಟು ರುಚಿಗೆ, ಮೊದಲು ಬೇಯಿಸಿ ಇಟ್ಟುಕೊಂಡ ಎರಡು ಕಪ್ ಹದವಾದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಎಲ್ಲ ಪದಾರ್ಥಗಳು ಚೆನ್ನಾಗಿ ಬೆರೆತು, ಸುವಾಸನೆ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ತಯಾರಾದ ಈ ತೆಂಗಿನಕಾಯಿ ಅನ್ನವನ್ನು ತಣ್ಣಗಾದ ಬಳಿಕ ದೇವಿಗೆ ನೈವೇದ್ಯವಾಗಿ ಅರ್ಪಿಸಬಹುದು.