ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಇಂದು (ಮಂಗಳವಾರ) ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಹಳೆಯ ಪಿಂಚಣಿ ಯೋಜನೆ, ಜಾತಿ ಗಣತಿ, ಸರ್ಕಾರಿ ಸೇವೆಗಳಲ್ಲಿ ಒಬಿಸಿಗಳಿಗೆ ಶೇ.27 ಮೀಸಲಾತಿ, ಮಹಿಳೆಯರಿಗೆ ಮಾಸಿಕ 1,500 ರೂ. ಆರ್ಥಿಕ ನೆರವು ನೀಡುವ ‘ನಾರಿ ಸಮ್ಮಾನ್ ನಿಧಿ’ ಹಾಗೂ 25 ಲಕ್ಷ ರೂ.ಗಳ ಆರೋಗ್ಯ ವಿಮೆ ಸೇರಿದಂತೆ 101 ಪ್ರಮುಖ ಭರವಸೆಗಳನ್ನು ಪ್ರಕಟಿಸಿದೆ.
ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ , ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು.
ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲು ‘ಜೈ ಕಿಸಾನ್ ಕೃಷಿ ಸಾಲ ಮನ್ನಾ ಯೋಜನೆ’ ಮುಂದುವರಿಕೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ 500 ರೂ.ಗೆ ಒದಗಿಸುವುದು. ಶಾಲಾ ಶಿಕ್ಷಣ ಉಚಿತ .ಆರೋಗ್ಯ ವಿಮಾ ಯೋಜನೆ ಪ್ರಾರಂಭ. ಈ ಯೋಜನೆಯಡಿ 25 ಲಕ್ಷ ರೂ.ಗಳ ಆರೋಗ್ಯ ವಿಮೆ ಮತ್ತು ಪ್ರತಿ ಕುಟುಂಬಕ್ಕೆ 10 ಲಕ್ಷ ರೂ.ಗಳ ಅಪಘಾತ ವಿಮೆಯನ್ನು ಒದಗಿಸಲಾಗುವುದು ಎಂದು ಪ್ರಕಟಿಸಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 2,500 ರೂ.ಗೆ ಪ್ರತಿ ಕ್ವಿಂಟಲ್ ಭತ್ತ ಹಾಗೂ 2,600 ರೂ.ಗೆ ಪ್ರತಿ ಕ್ವಿಂಟಲ್ ಗೋಧಿಯನ್ನು ಖರೀದಿಸುತ್ತದೆ. ನೀರಾವರಿಗಾಗಿ ಐದು ಹೆಚ್ಪಿವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುವುದು. ರೈತರ ಬಾಕಿ ಉಳಿದಿರುವ ವಿದ್ಯುತ್ ಬಾಕಿ ಮನ್ನಾ ಮಾಡಲಾಗುವುದು. ರೈತರ ಚಳವಳಿ ಮತ್ತು ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದ ಸುಳ್ಳು ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಕಮಲ್ ನಾಥ್ ಭರವಸೆ ನೀಡಿದ್ದಾರೆ.
ಇಂದಿರಾ ಗೃಹ ಜ್ಯೋತಿ ಯೋಜನೆಯಡಿ 100 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ನಂತರದ 200 ಯೂನಿಟ್ ವಿದ್ಯುತ್ ಅರ್ಧ ಶುಲ್ಕದಲ್ಲಿ ನೀಡಲಾಗುವುದು. ಆರೋಗ್ಯದ ಹಕ್ಕು ಕಾನೂನು ಜಾರಿ ಮಾಡುತ್ತೇವೆ. ಹಳೆ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ತರುತ್ತೇವೆ. ಸರ್ಕಾರಿ ಸೇವೆಗಳು ಮತ್ತು ಯೋಜನೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ಕಲ್ಪಿಸಲಾಗುತ್ತದೆ. ಸಾಗರ ಜಿಲ್ಲೆಯಲ್ಲಿ ಸಂತ ಶಿರೋಮಣಿ ರವಿದಾಸ್ ಹೆಸರಿನಲ್ಲಿ ಕೌಶಲ್ಯ ಉನ್ನತೀಕರಣ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ.
ಇತರ ಭರವಸೆಗಳು:
‘ಪಢೋ ಪಢಾವೋ’ ಯೋಜನೆಯಡಿ 1ರಿಂದ 8ನೇ ತರಗತಿವರೆಗಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ 500 ರೂ., 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ 1000 ರೂ., 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾಸಿಕ 1500 ರೂ. ಆರ್ಥಿಕ ನೆರವು
ರಾಜ್ಯದಲ್ಲಿ ಬುಡಕಟ್ಟು ಜನಾಂಗಕ್ಕೆ ಇತರ ಹಲವು ಕಾರ್ಯಕ್ರಮಗಳ ಹೊರತಾಗಿ ಬುಡಕಟ್ಟು ಪ್ರದೇಶಗಳಲ್ಲಿ ಪಂಚಾಯತ್ ವಿಸ್ತರಣೆ ಕಾಯ್ದೆ ಅನುಷ್ಠಾನ
ನಂದಿನಿ ಗೋಧನ್ ಯೋಜನೆಯಡಿ 2 ರೂ. ದರದಲ್ಲಿ ಒಂದು ಕೆಜಿ ಹಸುವಿನ ಸಗಣಿ ಖರೀದಿ. 1000 ಗೋಶಾಲೆಗಳ ನಿರ್ಮಿಸುವ ಯೋಜನೆ ಪುನರಾರಂಭ ಮತ್ತು ಸಹಕಾರಿ ಕ್ಷೇತ್ರದ ಮೂಲಕ ಹಾಲು ಖರೀದಿಸಲು ಬೋನಸ್
ನೇಮಕಾತಿ ಕಾಯ್ದೆ ಜಾರಿ ಮತ್ತು ಎರಡು ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ. ಕಳೆದ 18 ವರ್ಷಗಳಿಂದ ಬಾಕಿ ಇರುವ ಶಿಕ್ಷಕರು, ಪಟ್ವಾರಿಗಳು, ಅರಣ್ಯ ಸಿಬ್ಬಂದಿ, ನರ್ಸ್‌ಗಳು ಮತ್ತು ಪೊಲೀಸ್ ಹುದ್ದೆಗಳಿಗ ನೇಮಕ
ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಎರಡರಿಂದ ನಾಲ್ಕು ಹೊಸ ಹುದ್ದೆ ಸೃಷ್ಟಿಸಿ ಭರ್ತಿ
ರಾಜ್ಯದ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ ಸಿಗುವಂತೆ ಮಾಡಲು ಸ್ಪರ್ಧಾತ್ಮಕ ಪರೀಕ್ಷಾ ಶುಲ್ಕದಲ್ಲಿ ಶೇ.100ರಷ್ಟು ವಿನಾಯಿತಿ
ಯುವ ಸ್ವಾಭಿಮಾನ್ ಯೋಜನೆಯಡಿ ಎರಡು ವರ್ಷಗಳ ಕಾಲ ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಮಾಸಿಕ 1,500 ರೂ.ನಿಂದ 3000 ರೂ.ವರೆಗೆ ಆರ್ಥಿಕ ನೆರವು
ಹೆಣ್ಣು ಮಕ್ಕಳ ಮದುವೆಗೆ ಹೊಸ ಯೋಜನೆ- 1.01 ಲಕ್ಷ ನೆರವು ನೀಡುವ ಭರವಸೆ
ಸ್ಟಾರ್ಟ್‌ಅಪ್‌ಗಳಿಗೆ ಶೇ.3ರ ಬಡ್ಡಿ ದರದಲ್ಲಿ ಮಹಿಳೆಯರಿಗೆ 25 ಲಕ್ಷ ರೂ.ವರೆಗೆ ಸಾಲ
ವಸತಿ ರಹಿತ ಗ್ರಾಮೀಣ ಮಹಿಳೆಯರಿಗೆ 5000 ಚದರ ಅಡಿ ನಿವೇಶನ
ಮಹಾನಗರ ಪಾಲಿಕೆ ಬಸ್‌ನಲ್ಲಿ ಮಹಿಳೆಯರು ಪ್ರಯಾಣಿಸಲು ಉಚಿತ ಪಾಸ್
ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರನ್ನು ಕಾಯಂ
‘ಮೇರಿ ಬಿಟಿಯಾ ರಾಣಿ’ ಯೋಜನೆಯಡಿ ಹೆಣ್ಣು ಮಗು ಹುಟ್ಟಿದಾಗಿನಿಂದ ಅವರ ಮದುವೆಯವರೆಗೆ 2.51 ಲಕ್ಷ ರೂ. ನೆರವು