ಹೊಸದಿಗಂತ ವರದಿ, ಚಿತ್ರದುರ್ಗ :
ರಾಜ್ಯ ಸರ್ಕಾರ ದುರಾಡಳಿತ, ಭ್ರಷ್ಟಾಚಾರ, ಶೇ ೬೦ ಕಮೀಷನ್‌ನಲ್ಲಿ ಮುಳುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲದರಾಮಯ್ಯ ಆಗಿದ್ದಾರೆ. ಇದರಿಂದಾಗಿ ರಾಜ್ಯ ಸಾಲದಲ್ಲಿ ಮುಳುಗಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಉಪಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಸರ್ಕಾರ ೧ ಲಕ್ಷ ೩೨ ಸಾವಿರ ಕೋಟಿ ಸಾಲದಲ್ಲಿ ಮುಳುಗಿದೆ. ಸಿದ್ದರಾಮಯ್ಯ ಒಬ್ಬನೇ ೪ ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಒಬ್ಬರ ತಲೆ ಮೇಲೆ ೮೦ ಸಾವಿರ ಸಾಲದ ಹೊರೆ ಕೂತಿದೆ. ಈ ಸರ್ಕಾರ ನಂಬಿ ಕುಳಿತರೆ ಅದೋಗತಿ ಆಗಲಿದೆ. ಅನ್ನಭಾಗ್ಯದ್ದು ೭೫೦ ಕೋಟಿ ಕೊಟ್ಟಿಲ್ಲ. ಸಿದ್ದರಾಮಯ್ಯ ಸಾಲಗಾರ ಆಗಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದಿಲ್ಲ. ಈ ಸರ್ಕಾರವನ್ನು ಜನರು ಕಿತ್ತೊಗೆಯುತ್ತಾರೆ. ಇವೆಲ್ಲವೂ ಮುಂದಿನ ಚುನಾವಣೆಗೆ ಪ್ರತಿಬಿಂಬ ಆಗಲಿವೆ. ರಾಜ್ಯ ಸರ್ಕಾರದ ಎಲ್ಲ ಅಂಶಗಳನ್ನು ಪರಿಗಣಿಸಿ ಜನರು ಬಿಜೆಪಿಗೆ ಮತ ನೀಡಲಿದ್ದಾರೆ ಎಂದ ಅವರು, ಬಿಜೆಪಿ ಕಳ್ಳೆತ್ತುಗಳಿಗೆ ವೋಟ್ ಹಾಕಬೇಡಿ ಎಂಬ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಡಿಕೆಶಿ, ಸಿದ್ದರಾಮಯ್ಯ ಜೋಡೆತ್ತುಗಳಲ್ಲ ಕುಂಟೆತ್ತುಗಳು. ಡಿಕೆಶಿ, ಸಿದ್ದರಾಮಯ್ಯ ಇಬ್ಬರೂ ಸಹ ಒಬ್ಬರ ದಾರಿಗೆ ಮತ್ತೊಬ್ಬರು ಬರಲ್ಲ. ಅಧಿಕಾರಕ್ಕಾಗಿ ಡಿಕೆಶಿ ಭಕಪಕ್ಷಿಯಂತೆ ಕಾಯುತ್ತಿದ್ದಾರೆ. ಕುಂಟೆತ್ತುಗಳು ಬೇಡವೆಂದು ಜನ ತೀರ್ಮಾನಿಸಿದ್ದಾರೆ ಎಂದು ತಿರುಗೇಟು ನೀಡಿದರು.
ನಾವು ಅಧಿಕಾರದಲ್ಲಿದ್ದಾಗ ಹೆಚ್ಚು ಸಾಲ ಮಾಡದೆ ಅಭಿವೃದ್ಧಿಗೆ ಒತ್ತು ನೀಡಿದ್ದೆವು. ಆದರೆ ಈ ಸರ್ಕಾರ ಮೂರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಏನೇನು ಉದ್ಘಾಟನೆ ಮಾಡ್ತಿದ್ದಾರೆ ಅವೆಲ್ಲವೂ ಬಿಜೆಪಿ ಅವಧಿಯವು. ಕೇಂದ್ರ ಸರ್ಕಾರ ಜನರ ಮೇಲೆ ಬೆಲೆ ಏರಿಕೆ ಯುದ್ದ ಮಾಡುತ್ತಿದೆ ಎಂದ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ತುಪ್ಪದ ಬೆಲೆ ಜಿ.ಎಸ್.ಟಿ. ಕಡಿಮೆ ಮಾಡಿದೆ. ಕೇಂದ್ರ ಕಡಿಮೆ ಮಾಡಿದ್ದರೆ ರಾಜ್ಯ ಸರ್ಕಾರ ಎಲ್ಲವನ್ನು ಜಾಸ್ತಿ ಮಾಡಿದೆ. ಎರಡು ಉಪಚುನಾವಣೆ ಬಳಿಕ ಜನರ ಮೇಲೆ ಎಲ್ಲಾ ತೆರಿಗೆ ಹಾಕುತ್ತಾರೆ. ಇನ್ನು ಮುಂದೆ ರಾಜ್ಯ ಸರ್ಕಾರ ಮಾರಿಹಬ್ಬ ಶುರು ಮಾಡಲಿದೆ. ಹಾಗಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನರು ಬುದ್ದಿ ಕಲಿಸಬೇಕು ಎಂದರು.



