ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಬಿಜೆಪಿ ಸಂಸದ ಪಿ.ಸಿ. ಮೋಹನ್ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಕೊಡುಗೆಗಳ ಬಗ್ಗೆ ಪಿ.ಸಿ.ಮೋಹನ್ ಹೊಗಳುತ್ತಿದ್ದರು. ಇದಕ್ಕೆ
ಶಾಸಕ ಪ್ರದೀಪ್ ಈಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಗಲಾಟೆಗೆ ಕಾರಣವಾಗಿದೆ.
ಈ ಕುರಿತು ಬಿಜೆಪಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ರನ್ನ ‘ಆಕ್ಸಿಡೆಂಟಲ್ ಎಂಎಲ್ಎ’ ಎಂದು ಟೀಕಿಸಿದೆ.
ಪೋಸ್ಟ್ ನಲ್ಲಿ ಆಕ್ಸಿಡೆಂಟಲ್ ಎಂ.ಎಲ್.ಎ ಪ್ರದೀಪ್ ಈಶ್ವರ್ ಅವರೇ, ಅಲ್ಲಿ ನಡೆಯುತ್ತಿರುವುದು ಬಿಜೆಪಿ ಕಾರ್ಯಕ್ರಮವೂ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮವೂ ಅಲ್ಲ. ಅಲ್ಲಿ ನಡೆಯುತ್ತಿರುವುದು ಪವಾಡ ಪುರುಷ ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮ!! ನಿಮಗೆ ಅಷ್ಟೊಂದು ಪ್ರಚಾರದ ಗೀಳಿದ್ದರೆ ಮಜಾ ಟಾಕೀಸ್ ಅಥವಾ ಕಾಮಿಡಿ ಕಿಲಾಡಿ ಕಾರ್ಯಕ್ರಮಕ್ಕೆ ಹೋಗಿ. ನಿಮ್ಮ ಪ್ರಚಾರದ ಹಪಾಹಪಿಗಾಗಿ ಪೂಜನೀಯ ಕೈವಾರ ತಾತಯ್ಯ ಅವರ ವೇದಿಕೆಗೆ ಅವಮಾನಿಸಬೇಡಿ ಎಂದು ಬಿಜೆಪಿ ಕಿಡಿಕಾರಿದೆ.