ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಮಲ್ ಹಾಸನ್ ಅವರ ನಟನೆಯ ‘ಥಗ್ ಲೈಫ್’ ಸಿನಿಮಾಗೆ ಕರ್ನಾಟಕದಲ್ಲಿ ಬಿಡುಗಡೆಗೆ ಅಡಚಣೆ ಉಂಟಾಗಿದೆ.
ರಿಲೀಸ್ಗೆ ಭದ್ರತೆ ಕೋರಿ ಸಿನಿಮಾ ತಂಡ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ವಿಚಾರಣೆ ಇಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆದಿದೆ. ಈ ವೇಳೆ ಕಮಲ್ ಹಾಸನ್ಗೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ರಾಜಗೋಪಾಲಚಾರಿ ಇದೇ ರೀತಿಯ ಹೇಳಿಕೆ ನೀಡಿದ್ದರು. ನಂತರ ಅವರು ಕ್ಷಮಾಯಾಚನೆ ಮಾಡಿದ್ದರು. ಆದರೆ ಕಮಲಹಾಸನ್ ಯಾವುದೇ ಕ್ಷಮಾಯಾಚನೆ ಮಾಡಿಲ್ಲ. ಅವರು ಸಿನಿಮಾ ಮಾಡಿರೋದು ವಾಣಿಜ್ಯ ಉದ್ದೇಶದಿಂದ. ಈಗ ತಪ್ಪು ಮಾಡಿದ್ದಾರೆ. ಅವರು ಮಾಡಿದ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೇ? ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಕಮಲ್ ಅವರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.
ನಿಮ್ಮ ಹೇಳಿಕೆಯಿಂದ ಶಿವರಾಜಕುಮಾರ್ ಸಮಸ್ಯೆ ಅನುಭವಿಸುವಂತಾಗಿದೆ. ನೀವು ನಿಮ್ಮ ಹೇಳಿಕೆಯನ್ನು ನಿರಾಕರಿಸಿಲ್ಲ, ಒಪ್ಪಿಕೊಂಡಿದ್ದೀರಾ. ಆದರೆ ಕ್ಷಮೆಯಾಚನೆ ಮಾಡಲು ಸಿದ್ಧರಿಲ್ಲ. ಬೇರೆಯವರ ಭಾವನೆಗಳಿಗೆ ಧಕ್ಕೆ ತಂದು ಸಿನಿಮಾ ಬಿಡುಗಡೆ ಬಯಸುತ್ತಿದ್ದೀರಾ? 300 ಕೋಟಿ ರೂಪಾಯಿಯ ಸಿನಿಮಾ ಎನ್ನುತ್ತಿದ್ದೀರಾ, ಕ್ಷಮೆಯಾಚನೆ ಮಾಡಿ. ಆಗ ಸಮಸ್ಯೆಯೇ ಇರುವುದಿಲ್ಲ’ ಎಂದು ಕೋರ್ಟ್ ಹೇಳಿದೆ.
‘ಯಾರೊಬ್ಬರ ಭಾವನೆಯ ಮೇಲೆ ಸವಾರಿ ಮಾಡಬಾರದು. ಆದೇಶ ಹೊರಡಿಸಲು ನಮಗೆ ಸಮಸ್ಯೆ ಇಲ್ಲ. ಕ್ಷಮೆ ಕೇಳಲಾಗದಿದ್ದರೆ ಬಿಡಿ ಕರ್ನಾಟಕದಲ್ಲಿ ಬಿಡುಗಡೆ ಏಕೆ ಬೇಕು’ ಎಂದು ಕಮಲ್ ಹಾಸನ್ ವಕೀಲರಿಗೆ ನಾಗಪ್ರಸನ್ನ ಪ್ರಶ್ನೆ ಮಾಡಿದ್ದಾರೆ.