ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯೋಗದ ಆಮಿಷ ತೋರಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ನಿರುದ್ಯೋಗಿಗಳ ಸಂಕಷ್ಟವನ್ನು ದುರುಪಯೋಗಪಡಿಸಿಕೊಂಡ ಈ ಜೋಡಿ, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ದೋಚುತ್ತಿದ್ದರೆಂಬ ಆರೋಪ ಕೇಳಿಬಂದಿದೆ.
ಬಂಧಿತರನ್ನು ಜೈಸನ್ ಡಿಸೋಜಾ ಮತ್ತು ಲವೀನಾ ಎಂದು ಗುರುತಿಸಲಾಗಿದೆ.
ಇವರು ಕೋರ್ಟ್‌ನಲ್ಲಿ ಡಿ ಗ್ರೂಪ್ ಹುದ್ದೆ ಕೊಡಿಸುವುದಾಗಿ ಹೇಳಿ, ಒಬ್ಬೊಬ್ಬರಿಂದ 10 ರಿಂದ 25 ಲಕ್ಷ ರೂ.ವರೆಗೆ ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಸುಮಾರು 500ಕ್ಕೂ ಹೆಚ್ಚು ಜನರನ್ನು ಮೋಸಗೊಳಿಸಿ, ಒಟ್ಟು 25 ಕೋಟಿ ರೂ.ಗೂ ಅಧಿಕ ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಮೋಸವನ್ನು ನಂಬಿಸಲು ನ್ಯಾಯಾಧೀಶರ ಸಹಿಯನ್ನು ನಕಲು ಮಾಡಿ ನಕಲಿ ನೇಮಕಾತಿ ಆದೇಶ ಪತ್ರಗಳನ್ನು ತೋರಿಸುತ್ತಿದ್ದರು. ಹಣ ಪಡೆದ ಬಳಿಕ ಕೆಲಸದ ಬಗ್ಗೆ ಕೇಳಿದಾಗ ಮುಂದೂಡುತ್ತಾ, ಕೊನೆಯಲ್ಲಿ ಸಂಪರ್ಕ ತಪ್ಪಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:
ವಂಚನೆಗಾಗಿ ಏಜೆಂಟ್‌ಗಳ ಮೂಲಕ ಜಾಲವನ್ನೇ ನಿರ್ಮಿಸಿಕೊಂಡಿದ್ದ ಆರೋಪಿಗಳು, ಖಾಸಗಿ ಹೋಟೆಲ್‌ಗಳಲ್ಲಿ ಭೇಟಿಗಳನ್ನು ಆಯೋಜಿಸಿ ನಕಲಿ ಆಫರ್ ಲೆಟರ್‌ಗಳನ್ನು ತೋರಿಸಿ ನಂಬಿಸುತ್ತಿದ್ದರು ಎನ್ನಲಾಗಿದೆ.
ಹಿಂದೆಯೂ ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ಅದೇ ರೀತಿಯ ವಂಚನೆ ನಡೆಸಿದ್ದರು. ಸದ್ಯ ಬಂಧಿತರನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು, ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.



