ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಸ್ಟ್ 96 ಗಂಟೆ! ಒಂದು ವೇಳೆ ಭಾರತದ ಜೊತೆ ಪಾಕಿಸ್ತಾನ ಯುದ್ಧಕ್ಕೆ ನಿಂತರೆ ಕೇವಲ 96 ಗಂಟೆಗಳಲ್ಲಿ ಪಾಕ್‌ನ ಶಸ್ತ್ರಾಸ್ತ್ರಗಳೆಲ್ಲಾ ಖಾಲಿಯಾಗಲಿವೆ.
ಸಧ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಯುದ್ಧ ಸಾಮರ್ಥ್ಯ ನಾಲ್ಕು ದಿನಗಳಿಗಷ್ಟೇ ಸೀಮಿತವಾಗಿದೆ. ಜೊತೆಗೆ ಭಾರತದ ಎದುರು ಯುದ್ಧ ಮಾಡಬೇಕೆಂಬ ಭೀತಿಯಿಂದ 5,250ಕ್ಕೂ ಅಧಿಕ ಪಾಕಿಸ್ತಾನಿ ಸೈನಿಕರು, ಉನ್ನತ ಅಧಿಕಾರಿಗಳು ಸರಣಿ ರಾಜೀನಾಮೆ ಕೂಡಾ ನೀಡಿದ್ದಾರೆ.
ಇವುಗಳಿಗೆ ಕಾರಣ ಏನು?
ಪಾಕ್ ಕಳೆದ ಎರಡು ವರ್ಷಗಳ ಹಿಂದೆ ಭಾರೀ ಆರ್ಥಿಕ ಸಮಸ್ಯೆಗೆ ಸಿಲುಕಿತ್ತು. ಇದರಿಂದ ಪಾರಾಗಲು ಅದು 364 ದಶಲಕ್ಷ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಮಾರಾಟ ಮಾಡಿತ್ತು. ಆದರೆ ರಷ್ಯಾ ಜತೆಗಿನ ದ್ವಿಪಕ್ಷೀಯ ಸಂಬಂಧ ಹಾಳಾಗುವ ಭಯದಿಂದ ಉಕ್ರೇನ್‌ಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದನ್ನು ಪಾಕ್ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಅತ್ತ ಉಕ್ರೇನ್ ರಕ್ಷಣಾ ಸಚಿವರ ಪಾಕ್ ಪ್ರವಾಸದ ವೇಳೆ ಪಾಕಿಸ್ತಾನ ಶಸ್ತ್ರಾಸ್ತ್ರ ಮಾರಾಟ ಮಾಡಿದ ವರದಿಯನ್ನು ತಳ್ಳಿಹಾಕಿದ್ದರು. ಇಲ್ಲಿ ಪಾಕ್ ನೇರವಾಗಿ ಉಕ್ರೇನ್‌ಗೆ ಶಸ್ತ್ರಾಸ್ತ್ರ ಮಾರಾಟ ಮಾಡದೆ, ಅಮೆರಿಕದ ಎರಡು ಖಾಸಗಿ ಶಸ್ತ್ರಾಸ್ತ್ರ ಕಂಪೆನಿಗಳ ಮೂಲಕ ಮಾರಾಟ ಮಾಡಿದೆ ಎನ್ನಲಾಗಿದೆ. ಇದೇ ಕಾರಣದಿಂದ ಪಾಕ್ ಯುದ್ಧ ಸಾಮಾಗ್ರಿಗಳ ಕೊರತೆ ಅನುಭವಿಸುತ್ತಿದೆ.
ಒಂದೆಡೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಯುದ್ಧ ನಡೆಯುತ್ತಲಿದ್ದು, ಇನ್ನೊಂದೆಡೆ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವೂ ನಿಂತಿಲ್ಲ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಮಧ್ಯೆ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ ಮತ್ತು ಇರಾನ್ ದೇಶಗಳು ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿವೆ. ರಷ್ಯಾ ವಿರುದ್ಧ ಯುದ್ಧ ನಡೆಸುತ್ತಿರುವ ಉಕ್ರೇನ್‌ಗೆ 40ಕ್ಕೂ ಅಧಿಕ ನ್ಯಾಟೋ ರಾಷ್ಟ್ರಗಳ ಬೆಂಬಲವಿದ್ದು, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಶಸ್ತ್ರಾಸ್ತ್ರ ಸರಬರಾಜು ಮಾಡಿವೆ. ಇಂತಹ ಸಂದರ್ಭದಲ್ಲಿ ವಿಶ್ವದಲ್ಲೇ ಯುದ್ಧ ಸಾಮಾಗ್ರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪಾಕಿಸ್ತಾನದ ಶಸ್ತ್ರಾಸ್ತ್ರ ಬೇಡಿಕೆ ಪೂರೈಸಲು ಯಾವುದೇ ರಾಷ್ಟ್ರಗಳು ಮುಂದಾಗುವ ಸಾಧ್ಯತೆಯಿಲ್ಲ. ಇದಲ್ಲದೆ ಪಾಕಿಸ್ತಾನದ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಹಳೆಯ ತಂತ್ರಜ್ಞಾನಗಳನ್ನು ಬಳಸುತ್ತಿದ್ದು, ಬೇಡಿಕೆಯಷ್ಟು ಶಸ್ತ್ರಾಸ್ತ್ರ ಉತ್ಪಾದಿಸುವ ಸಾಮರ್ಥ್ಯ ಕೂಡಾ ಹೊಂದಿಲ್ಲ.