ಉಸಿರು ಬಿಗಿದ ವಾತಾವರಣ ಇದೆ ಎಂದೆನಿಸಿದರೆ….ಸಂಸದ ಶಶಿ ತರೂರ್ ಮುಂದೆ ಎರಡು ಆಯ್ಕೆ ಇಟ್ಟ ಕಾಂಗ್ರೆಸ್ ಮುಖಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಶಿತರೂರ್​ ಅವರು ಕಾಂಗ್ರೆಸ್​ ನಲ್ಲಿ ಉಸಿರು ಬಿಗಿದ ವಾತಾವರಣದಲ್ಲಿದ್ದೇನೆ ಎಂದು ಭಾವಿಸಿದರೆ, ಅವರು ಸ್ಪಷ್ಟವಾದ ರಾಜಕೀಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹಿರಿಯ ಕಾಂಗ್ರೆಸ್​ ನಾಯಕ ಕೆ ಮುರುಳೀಧರನ್​ ಹೇಳಿದ್ದಾರೆ.

ಕೇರಳ ಕಾಂಗ್ರೆಸ್ ಘಟಕ ಮತ್ತೆ ಕಿಡಿಕಾರಿದ್ದು, ತರೂರ್​ ಅವರ ಕ್ರಮಗಳು ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡುತ್ತಿದೆ ಹಾಗೂ ಪಕ್ಷವನ್ನು ಸಂಕಷ್ಟಕ್ಕೆ ಈಡು ಮಾಡುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ತುರ್ತು ಪರಿಸ್ಥಿತಿ ಸಮಯದಲ್ಲಿ ಇಂದಿರಾಗಾಂಧಿ ಕ್ರಮದ ಕುರಿತು ತರೂರ್​​ ಟೀಕಿಸಿದ ಬೆನ್ನಲ್ಲೇ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಲಾಗುತ್ತಿದೆ. ಅವರ ಮುಂದೆ ಎರಡು ಆಯ್ಕೆಗಳಿವೆ. ತರೂರ್​ ಸದ್ಯ ಸಂಸತ್​​ನಲ್ಲಿ ಮತ್ತು ಪಕ್ಷದಲ್ಲಿ ಎರಡು ಪಾತ್ರ ನಿರ್ವಹಿಸುತ್ತಿದ್ದಾರೆ. ಇವುಗಳಲ್ಲಿ ಮುಂದುವರೆಯುವ ಆಯ್ಕೆ ಅವರ ಮುಂದೆ ಇದೆ ಎಂದು ಮುರಳಿಧರನ್​ ಹೇಳಿದ್ದಾರೆ.

ಅವರಿಗೆ ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯವಿದ್ದರೆ, ಅವರ ಮಾತಿಗೆ ಪಕ್ಷದಲ್ಲಿ ಸದಾ ಜಾಗವಿದೆ. ಆದರೆ, ಅವರಿಗೆ ಪಕ್ಷದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದರೆ, ಅವರು ಕೆಳಗಿಳಿದು, ತಮ್ಮ ರಾಜಕೀಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಒಂದೊಮ್ಮೆ ತರೂರ್​ ಪಕ್ಷದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೆ, ಅವರು ಪಕ್ಷದ ಚೌಕಟ್ಟಿನಲ್ಲಿ ಅದನ್ನು ವ್ಯಕ್ತಪಡಿಸಬಹುದು. ಆದರೆ, ಅವರಿಗೆ ಸದ್ಯದ ಪರಿಸ್ಥಿತಿ ಉಸಿರುಗಟ್ಟುತ್ತಿದೆ. ಅವರಿಗೆ ಮುಂದುವರೆಯಲು ಸಾಧ್ಯವಿಲ್ಲ ಎಂದರೆ, ಅವರು ಪಕ್ಷದ ಸ್ಥಾನಗಳಿಂದ ಕೆಳಗಿಳಿದು, ತಮಗೆ ಇಷ್ಟವಾದ ರಾಜಕೀಯ ಮಾರ್ಗವನ್ನು ಆರಿಸಿಕೊಳ್ಳಬೇಕು ಎಂದೂ ಮುರುಳಿಧರನ್​ ಸಲಹೆ ನೀಡಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಪಕ್ಷಗಳ ನಾಯಕರನ್ನು ಶಶಿ ತರೂರ್​ ಹೊಗಳುತ್ತಿದ್ದಾರಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಕಾಂಗ್ರೆಸ್​​ನ ಹಿರಿಯ ನಾಯಕ ಮುರಳಿಧರನ್​ ಕಾಂಗ್ರೆಸ್ ನಾಯಕರನ್ನು ಹೊರತುಪಡಿಸಿ ಎಲ್ಲರನ್ನೂ ಹೊಗಳುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!