ಲಕ್ಷಾಧಿಪತಿಯಾಗುವ ಆಸೆಗೆ ಬಿದ್ದರೆ ಭಿಕ್ಷಾಟನೆಯೇ ಗತಿ!

ಹೊಸದಿಗಂತ ವರದಿ, ಸುಂಟಿಕೊಪ್ಪ :

ಆಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆಗಳು ಬದಲಾದ ಕಾಲಘಟ್ಟದಲ್ಲಿ ಜನಸಾಮಾನ್ಯರಿಗೂ ಲಭ್ಯವಾಗಿದ್ದು, ಮೊಬೈಲ್ ಮೂಲಕ ತಾವು ಇರುವ ಕಡೆಯಿಂದಲೇ ಅನ್‍ಲೈನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ವಿಶ್ವ ಸಂಪರ್ಕವನ್ನು ಪಡೆಯಬಹುದಾದ ದಿನಗಳಲ್ಲಿ ನಾವಿದ್ದೇವೆ.

ಈ ವ್ಯವಸ್ಥೆಯ ಲಾಭವನ್ನು ಎಷ್ಟು ಹೆಚ್ಚು ಪಡೆಯಲು ಸಾಧ್ಯವೋ ಅಷ್ಟೇ ದುರುಪಯೋಗ ಮತ್ತು ವಂಚನೆ ಪ್ರಕರಣಗಳೂ ವರದಿಯಾಗುತ್ತಿರುವುದು ವಿಪರ್ಯಾಸ.

ದುರಾದೃಷ್ಟಕರ ವಿಚಾರವೆಂದರೆ ಸಾಕಷ್ಟು ವಂಚನೆಯ ಪ್ರಕರಣಗಳು ವರದಿಯಾದ ಮೇಲೂ ಜನರು ಎಚ್ಚೆತ್ತುಕೊಳ್ಳದೆ ಹಣ ಗಳಿಕೆಯ ಆಸೆಯಿಂದ ವಂಚನೆಗೊಳ್ಳಗಾಗುತ್ತಿರುವುದು ಪ್ರತಿನಿತ್ಯ ವರದಿಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಜನರ ದುರಾಸೆಯೇ ಕಾರಣವೆಂದು ನೋವಿನಿಂದ ಹೇಳಬೇಕಾಗಿದೆ.

ಇದೀಗ ವಂಚನೆಯ ಜಾಲ ಚೆಕ್ ಮೂಲಕ ಮಾಡುವ ಹಂತಕ್ಕೆ ತಲುಪಿದೆ.

ಸೋಮವಾರಪೇಟೆಯ ವ್ಯಕ್ತಿಯೊಬ್ಬರಿಗೆ ಕೆಲವು ದಿನಗಳ ಹಿಂದೆ ‘ಕೌನ್‍ಬಾನೆಗ ಕರೋಡ್‍ಪತಿ’ ಎಂಬ ಹಿನ್ನಲೆಯ ದೂರವಾಣಿ ಕರೆ ಬರುತ್ತದೆ. ಕರೆ ಮಾಡಿದ ವ್ಯಕ್ತಿ ನಿಮಗೆ ಲಕ್ಕಿ ನಂಬರ್ ಬಂದಿದ್ದು ಅದು 2287 ಆಗಿದೆ. ಮುಂದಿನ ಹಂತದಲ್ಲಿ ಅನ್‍ಲೈನ್ ಕಂಪ್ಯೂಟರ್ ವ್ಯವಸ್ಥೆಯಲ್ಲಿರುವ ಬ್ಯಾಂಕ್ ಮ್ಯಾನೇಜರ್ ವಿಜಯ್‍ಕುಮಾರ್ ಎಂಬವರ ವ್ಯಾಟ್ಸಾಪ್ ನಂಬರಿಗೆ ಕರೆ ಮಾಡಲು ತಿಳಿಸುತ್ತಾರೆ. ಲಕ್ಕಿ ನಂಬರಿನ ಬಹುಮಾನದ ಮೊತ್ತ ರೂ 25ಲಕ್ಷ ಆಗಿದ್ದು, ಇದನ್ನು ಪೋನ್ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ. ಇದರಲ್ಲಿ ವ್ಯಕ್ತಿಯೊಬ್ಬರ ಸಹಿ ಮತ್ತು ಸಂಸ್ಥೆಯ ಸೀಲ್ ಕಂಡುಬರುತ್ತದೆ.

ಮೇಲ್ನೋಟಕ್ಕೆ ಇದು ಅಮಿತಾಬಚ್ಚನ್ ಅವರು ನಡೆಸಿಕೊಡುವ ಕೌನ್‍ಬಾನೆಗ ಕರೋಡ್‍ಪತಿ ಸಂಸ್ಥೆಯ ಚೆಕ್ ಮಾದರಿ ಹಾಗೂ ಸ್ವತಃ ಅಮಿತಾಬಚ್ಚನ್ ಸಹಿ ಮಾಡಿದಂತೆ ಕಾಣುತ್ತದೆ. ಬಹುಮಾನದ ಹಣ ನಿಮ್ಮದಾಗಬೇಕೆಂದರೆ ಚೆಕ್ ಮೇಲೆ ತಮ್ಮ ಬೆರಳಚ್ಚು ಇರಿಸಬೇಕೆಂದು ಸೂಚಿಸುತ್ತಾರೆ. ಒಂದು ವೇಳೆ ಬಹುಮಾನ ಬಂದ ಸಂಭ್ರಮದಲ್ಲಿ ಮೈಮರೆತು ಚೆಕ್ ಮೇಲೆ ಬೆರಳು ಇರಿಸಿದರೆ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಅಷ್ಟು ಹಣ ಸೈಬರ್ ಕಳ್ಳರ ಪಾಲಾಗುತ್ತದೆ.

ಹೀಗಾಗಿ ಈ ರೀತಿಯ ಸಂದೇಶಗಳನ್ನು ಧ್ವನಿ ಸಂದೇಶಗಳನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸಬಾರದೆಂದು ಈ ವ್ಯಕ್ತಿ ಜನರಿಗೆ ಮನವಿ ಮಾಡಿದ್ದಾರೆ.

ಪ್ರತಿ ನಿತ್ಯವೂ ಹಣ ಹೂಡಿಕೆಯಲ್ಲಿನ ವಿವಿಧ ರೀತಿಯ ವಂಚನೆ ಪ್ರಕರಣಗಳು ವರದಿಯಾಗುತ್ತಿದ್ದು ಆನ್‍ಲೈನ್ ಬ್ಯಾಂಕಿಂಗ್, ಆನ್‍ಲೈನ್ ಖರೀದಿಗಳನ್ನು ಹೆಚ್ಚಾಗಿ ಮಾಡುವವರು ಈ ರೀತಿಯ ವಂಚನೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!