ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಲೋಕದ ಸ್ವರ್ಗದಂತಿರುವ ಹಿಮಾಚಲ ಪ್ರದೇಶದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಿಡುತ್ತಿರುವ ಪ್ರವಾಸಿಗರ ವರ್ತನೆ ಬಗ್ಗೆ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ನೋವು ವ್ಯಕ್ತಪಡಿಸಿದೆ.
ಇಲ್ಲಿನ ಹಲವಾರು ಪ್ರವಾಸಿ ತಾಣಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದಿರುವ ಬಗ್ಗೆ ಅಧಿಕಾರಿಯೋರ್ವರು ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡು ಖೇದ ವ್ಯಕ್ತಪಡಿಸಿದ್ದಾರೆ.
ಅಟಲ್ ಸುರಂಗವನ್ನು ಹಾದು ಹೋದ ನಂತರ ಸಿಗುವ ಸಿಸ್ಸು ಗ್ರಾಮ ಇದಾಗಿದೆ. ಮೊದಲ ಎರಡು ಗ್ರಾಮಗಳು ಸಿಸ್ಸು ಹಾಗೂ ಖೋಕ್ಸರ್. ಈಗ, ಅಟಲ್ ಸುರಂಗದ ಮೂಲಕ ಪ್ರತಿ ನಿತ್ಯ ಸಾವಿರಾರು ವಾಹನಗಳು ಪ್ರವೇಶಿಸುತ್ತಿವೆ. ಜನರು ತಮ್ಮ ತ್ಯಾಜ್ಯವನ್ನು ಮರಳಿ ತೆಗೆದುಕೊಂಡು ಹೋಗುವರೆ? ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬರು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಇದು ನಿಜಕ್ಕೂ ಭಯಾನಕ. ನಾವೆಲ್ಲರೂ ಒಂದಿಷ್ಟು ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.
ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಇಲ್ಲಿಗೆ ಪ್ರವಾಸಿರು ಹೆಚ್ಚಾಗಿ ಕಾಲಿಡುತ್ತಿದ್ದಾರೆ.