ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಅಜಿತ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಚಿತ್ರವನ್ನು ಕಾಪಿರೈಟ್ ವಿವಾದದ ಹಿನ್ನೆಲೆ ನೆಟ್‌ಫ್ಲಿಕ್ಸ್‌ನಿಂದ ತೆಗೆದುಹಾಕಲಾಗಿತ್ತು. ಈಗ ಇದೇ ರೀತಿಯ ವಿವಾದದಲ್ಲಿ ಪ್ರದೀಪ್ ರಂಗನಾಥ್ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ ಡ್ಯೂಡ್ ಸಿಲುಕಿದೆ. ತಮ್ಮ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡಿರುವ ಕಾರಣಕ್ಕೆ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ಚಿತ್ರ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ಪ್ರದೀಪ್ ರಂಗನಾಥ್ ಅವರ ಡ್ಯೂಡ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸು ಕಂಡು, ಈಗಾಗಲೇ ₹100 ಕೋಟಿ ಗಳಿಸಿ ತಮಿಳು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ಲವ್ ಟುಡೇ ಮತ್ತು ಡ್ರ್ಯಾಗನ್ ನಂತರ ಡ್ಯೂಡ್ ಅವರ ಮೂರನೇ 100 ಕೋಟಿ ಕ್ಲಬ್ ಹಿಟ್ ಆಗಿ, ಅವರನ್ನು ತಮಿಳು ಚಿತ್ರರಂಗದ ಮುಂದಿನ ಸೂಪರ್‌ಸ್ಟಾರ್ ಎನ್ನುವ ಚರ್ಚೆಗೆ ಕಾರಣವಾಗಿದೆ. ಆದರೆ ಈ ಯಶಸ್ಸಿನ ನಡುವೆ ಚಿತ್ರ ಕಾಪಿರೈಟ್ ವಿವಾದಕ್ಕೆ ಸಿಲುಕಿರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.
ಇಳಯರಾಜ ಅವರು ತಮ್ಮ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಸೋನಿ ಮ್ಯೂಸಿಕ್, ಎಕೋ ರೆಕಾರ್ಡಿಂಗ್ ಮತ್ತು ಅಮೆರಿಕದ ಓರಿಯಂಟಲ್ ರೆಕಾರ್ಡ್ಸ್ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣ ಬುಧವಾರ ನ್ಯಾಯಾಧೀಶ ಎನ್. ಸೆಂಥಿಲ್ ಕುಮಾರ್ ಅವರ ಮುಂದೆ ವಿಚಾರಣೆಗೆ ಬಂದಾಗ, ಇಳಯರಾಜ ಪರವಾಗಿ ಹಿರಿಯ ವಕೀಲ ಎಸ್. ಪ್ರಭಾಕರನ್ ಹಾಜರಾಗಿ, ಡ್ಯೂಡ್ ಚಿತ್ರದಲ್ಲಿ ಇಳಯರಾಜ ಅವರ ಎರಡು ಹಾಡುಗಳನ್ನು ಯಾವುದೇ ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ವಾದಿಸಿದರು.
ಇತ್ತ ಸೋನಿ ಪರವಾಗಿ ಹಿರಿಯ ವಕೀಲ ವಿಜಯ್ ನಾರಾಯಣನ್, ಕಂಪನಿಯ ಆದಾಯ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು. ಆದರೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಇಂತಹ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬಾರದು ಎಂದು ನ್ಯಾಯಾಧೀಶರು ಎಚ್ಚರಿಸಿದರು ಹಾಗೂ ಆ ದಾಖಲೆಗಳನ್ನು ಕಂಪನಿಗೆ ಹಿಂದಿರುಗಿಸಿದರು.
ನ್ಯಾಯಾಧೀಶರು ಇಳಯರಾಜ ಅವರಿಗೆ ಡ್ಯೂಡ್ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಲು ಸಲಹೆ ನೀಡಿದ್ದು, ಈ ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿದ್ದಾರೆ. ಹೀಗಾಗಿ ಇಳಯರಾಜ ಹಾಗೂ ಪ್ರದೀಪ್ ರಂಗನಾಥ್ ಅವರ ಡ್ಯೂಡ್ ಚಿತ್ರ ನಡುವೆ ಕಾನೂನು ಹೋರಾಟ ಆರಂಭವಾಗಲಿದ್ದು, ಸಿನಿಮಾ ಇಂಡಸ್ಟ್ರಿಯಲ್ಲಿ ಇದು ಹೊಸ ಸಂಚಲನ ಸೃಷ್ಟಿಸಿದೆ.

