ಹೊಸದಿಗಂತ ವರದಿ ಹಾಸನ:
ಬೇಲೂರು-ಹಾಸನ ಮಾರ್ಗವಾಗಿ ಸಿಗುವ ಹಗರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 373 ರಸ್ತೆಯಲ್ಲಿ ರಸ್ತೆ ಅತಿಕ್ರಮಿಸಿ ಬೀದಿಬದಿಯಲ್ಲಿ ಹಂದಿ ಮಾಂಸದ ಅಂಗಡಿ ಶೆಡ್‌ಗಳು ತಲೆ ಎತ್ತಿವೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಶೆಡ್‌ಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಕೊಡಲೇಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ಬೇಲೂರು ತಾಲೂಕಿನ ಹಗರೆ ಗ್ರಾ.ಪಂ ವ್ಯಾಪಿಯಲ್ಲಿ ಹಾಸನ ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ದೇವಿರಮ್ಮ ದೇವಾಸ್ಥಾನ ಹಗರೆ ಗ್ರಾಮದಲ್ಲಿ ಈ ದೇವಾಲಯಕ್ಕೆ ದಿನನಿತ್ಯ ನೂರಾರು ಭಕ್ತಾದಿಗಳು ಆಗಮಿಸುತ್ತಾರೆ. ದೇವಾಲಯಕ್ಕೆ ಬರುವ ಭಕ್ತಾದಿಗಳು ತಮ್ಮ ಇಷ್ಠಾರ್ಥ ಈಡೇರಿಕೆಗಾಗಿ ಹಂದಿ ಹಾಗೂ ಕೋಳಿಯನ್ನು ಹರಕೆಯಾಗಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಕೆಲವರು ಹಾಸನ ಬೇಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿಗೆ ಹೊಂದಿಕೊಂಡಂತೆ ಶಾಶ್ವತವಾಗಿ ಹಂದಿ ಮಾಂಸದ ಶೆಡ್‌ಗಳನ್ನು ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಈ ರಸ್ತೆ ಮೊದಲೇ ಅಪಘಾತವಲಯವಾಗಿದ್ದು ರಸ್ತೆಯಲ್ಲಿ ಅನಾಧಿಕೃತ ಶೆಡ್‌ನಿಂದ ಅಪಾಘಾತಗಳು ಸೇರಿದಂತೆ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತದೆ ಎಂದು ಸ್ಥಳೀಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇಲೂರು-ಹಾಸನ ರಾಷ್ಟಿಯ ಹೆದ್ದಾರಿ 373 ರಸ್ತೆಯ ಹಗರೆ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಹಂದಿ ಮಾಂಸದ ಅಂಗಡಿಗಳಿವೆ. ಆದರಲ್ಲಿ ಕೆಲವು ಹಂದಿ ಮಾಂಸದ ಅಂಗಡಿ ತಮ್ಮ ಖಾಸಗಿ ಜಾಗದಲ್ಲಿ ನಿರ್ಮಿಸಿಕೊಂಡು ಅಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸಿದರೆ ಇನ್ನೂ ಕೆಲವರು ರಸ್ತೆ ಬದಿಯ ಸರ್ಕಾರಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಅನಾಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದಾರೆ.
ಈ ಮಾರ್ಗದಲ್ಲಿ ದಿನನಿತ್ಯ ಸಾವಿರಾರು ವಾಹನ ಸಂಚಾರವಷ್ಟೇ ಅಲ್ಲದೆ ಜನಗಳ ಓಡಾಟವು ಸಹ ಹೆಚ್ಚಾಗುತ್ತಿದ್ದು ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಸ್ತೆಯ ಎರಡೂ ಬದಿಯಲ್ಲೂ ಅನಧಿಕೃತ ಅಂಗಡಿಗಳು ನಿರ್ಮಾಣಗೊಂಡು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ಅಡಚಣೆ, ಹಾಗೂ ಅಪಘಾತಗಳು ಉಂಟಾಗುವ ಸಂಭವವಿದೆ ಎಂದು ಸ್ಥಳೀಯರ ಹಾಗೂ ವಾಹನ ಸವಾರರ ಆತಂಕವಾಗಿದೆ.
ಹಗರೆ ಗ್ರಾಮದಲ್ಲಿ ಈ ಹಂದಿ ಮಾಂಸದ ಶೆಡ್‌ಗಳು ಇರುವಲ್ಲಿ ರಸ್ತೆ ತಿರುವು ಸಹ ಇರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ, ರಸ್ತೆ ಬದಿಗೆ ಹೊಂದಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಬೇಲೂರು ತಾಲ್ಲೂಕಿನಲ್ಲಿರುವ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕನಿಷ್ಠ ಮನುಷ್ಯತ್ವ ಇಲ್ಲ. ಹೆದ್ದಾರಿ ಅಧಿಕಾರಿಗಳಿಗೆ ಸಂಬಳ, ಸಾರಿಗೆ ಎಲ್ಲವೂ ಇದೆ ಆದರೆ ಈ ರಸ್ತೆಯಲ್ಲಿ ಆಗುತ್ತಿರುವ ಸಾವು ನೋವು ಹಾಗೂ ಈ ಅಕ್ರಮ ಶೆಡ್‌ಗಳು ಮಾತ್ರ ಕಣ್ಣಿಗೆ ಕಾಣಿಸುತ್ತಿಲ್ಲವೇ. ಏನು ಮಾಡುತ್ತಾ ಇದ್ದಾರೆ..? ಇವರನ್ನು ಯಾರೂ ಕೇಳೋರಿಲ್ಲ. ಈ ಸಂಬಂಧಪಟ್ಟ ಇಲಾಖೆಗಳಿಗೆ ಕಣ್ಣಿದ್ದು ಜಾಣ ಕುರುಡರಂತೆ ವರ್ತಿಸುತ್ತಿವೆ. ಜೀವ ಕೈಯಲ್ಲಿ ಹಿಡಿದು ಓಡಾಡುವಂತ ಪರಿಸ್ಥಿತಿ ಇದೆ. ಶೆಡ್ ನಿರ್ಮಿಸಿ ಬಾಡಿಗೆಗೆ ಕೊಟ್ಟಿದ್ದಾರೆ. ಇದ್ಯಾವುದೂ ಅಧಿಕಾರಿಗಳಿಗೆ ಕಾಣುತ್ತಿಲ್ಲ ಎಂದು ಪ್ರಶ್ನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಅವರು ಬೀದಿ ಬದಿವ್ಯಾಪರಿಗಳಿಗೆ ಕೆಲವು ನಿಬಂಧನೆಗಳಿವೆ ಅವುಗಳ ಪ್ರಕಾರ ವ್ಯಾಪಾರ ವಹಿವಾಟು ಮಾಡಲಿ, ಅಕ್ರಮವಾಗಿರುವ ಕಾನೂನು ಬಾಹಿರವಾಗಿರುವ ಹಂದಿ ಮಾಂಶದ ಅಂಗಡಿಗಳನ್ನು ತೆರವುಗೊಳಿಸದಿದ್ದಾರೆ ರಸ್ತೆ ಮಧ್ಯೆ ಕುಳಿತು ಹೋರಾಟದ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆರೋಗ್ಯ ಕಮಿಟಿ ಸದಸ್ಯ ಆರ್.ಕೆ ದೇವರಾಜು ಮಾತನಾಡಿ, ವಿಶ್ವ ವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಬರುವವರಿಗೆ ಈ ಹಗರೆ ಗ್ರಾಮದಲ್ಲಿ ಹಂದಿ ಅಂಗಡಿಗಳು ಪ್ರವಾಸಿಗರನ್ನು ಸ್ವಾಗತಿಸುತ್ತಿರುವುದು ದುರಂತವೇ ಹೌದು. ಈ ಹಂದಿ ಮಾಂಸದ ಅಂಗಡಿ ಶೆಡ್‌ಗಳು ಅರಣ್ಯ ಜಾಗಕ್ಕೆ ಹಾಗೂ ರಸ್ತೆಗೆ ಹೊಂದಿಕೊಂಡತೆ ನಿರ್ಮಾಣವಾಗಿವೆ. ಮಾಂಸದ ಅಂಗಡಿಗಳ ಎದುರು ಮಾಂಸ ಖರೀದಿಸಲು ವಾಹನ ಮಾಲೀಕರು ತಮ್ಮ ವಾಹನಗಳನ್ನು ರಸ್ತೆಗೆ ನಿಲ್ಲಿಸುತ್ತಾರೆ. ಇದರಿಂದ ಹಲವು ಅಪಘಾತಗಳಾಗಿ ಸಾವುನೋವುಗಳಾಗಿವೆ, ನಾಯಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುವುದು ಸಾಮಾನ್ಯವಾಗಿದೆ. ಪ್ರಮುಖ ರಸ್ತೆಯಲ್ಲಿ ಅನಧಿಕೃತ ಹಂದಿ ಮಾಂಸದ ಶೆಡ್‌ಗಳಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.