ಅಕ್ರಮ ವಾಸ, ಡ್ರಗ್ಸ್‌ ದಂಧೆ: 10 ಮಂದಿ ವಿದೇಶಿ ಪ್ರಜೆಗಳ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಕ್ರಮ ವಾಸ, ಡ್ರಗ್ಸ್ ದಂಧೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ನಗರದ 6 ವಿಭಿನ್ನ ಪೊಲೀಸ್ ಠಾಣೆಗಳಲ್ಲಿ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು 10 ಮಂದಿ ವಿದೇಶಿ ಪ್ರಜೆಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

10 ಮಂದಿಯಲ್ಲಿ ಇಬ್ಬರು ಮಹಿಳೆಯರಿದ್ದಾರೆ. 7 ಮಂದಿ ಅಕ್ರಮ ವಾಸ್ತವ್ಯ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ, ಮೂವರನ್ನು ಎನ್’ಡಿಪಿಎಸ್ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಪಡಿಸಲಾಗಿದೆ.

ಚಿಕ್ಕಜಾಲ ಪೊಲೀಸ್ ವ್ಯಾಪ್ತಿಯಲ್ಲಿ ಅಕ್ರಮ ವಾಸ್ತವ್ಯ ಹಿನ್ನೆಲೆಕ ಓರ್ವ ಮಹಿಳೆ ಸೇರಿದಂತೆ ಮೂವರು ವಿದೇಶಿ ಪ್ರಜೆಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಮುಂದಿನ ಕ್ರಮಗಳಿಗಾಗಿ ಅವರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಮುಂದೆ ಹಾಜರುಪಡಿಸಲಾಗಿದೆ.

ಅದೇ ರೀತಿ ಅಮೃತಹಳ್ಳಿ ಪೊಲೀಸ್ ವ್ಯಾಪ್ತಿಯಲ್ಲಿಯೂ ಒಬ್ಬ ವಿದೇಶಿಯನ್ನು ಬಂಧಿಸಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಓರ್ವ ಮಹಿಳೆ ಸೇರಿದಂತೆ ಮತ್ತಿಬ್ಬರು ವಿದೇಶಿಯರನ್ನು ಬಂಧಿಸಲಾಗಿದೆ. ಮತ್ತೊಬ್ಬ ವಿದೇಶಿಗನನ್ನು ಎಫ್‌ಆರ್‌ಆರ್‌ಒ ನಿರ್ದೇಶನಗಳನ್ನು ಅನುಸರಿಸಿ ಆತನ ದೇಶಕ್ಕೆ ಗರಿಪಾರು ಮಾಡಲಾಗಿದೆ.

ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಅಧಿಕಾರಿಗಳು ವಿದೇಶಿಗನೊಬ್ಬನನ್ನು ಬಂಧಿಸಿದ್ದು, ಆತನಿಂದ ಸುಮಾರು ಎಂಟು ಲಕ್ಷ ರೂ. ಮೌಲ್ಯದ 55 ಗ್ರಾಂ ಎಂಡಿಎಂಎ ಹರಳುಗಳು ಸೇರಿದಂತೆ ವಿವಿಧ ರೀತಿಯ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಗೋವಿಂದಪುರ ಪೊಲೀಸ್ ವ್ಯಾಪ್ತಿ ಹಾಗೂ ಪುಟ್ಟೇನಹಳ್ಳಿ ಪೊಲೀಸ್ ವ್ಯಾಪ್ತಿಯಲ್ಲಿ ಎನ್‌ಡಿಪಿಎಸ್ ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರು ವಿದೇಶಿಗರನ್ನು ಬಂಧನಕ್ಕೊಳಪಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!