ಹೊಸದಿಗಂತ, ಹಾಸನ :
ಹಾಸ್ಟೆಲ್‌ನಿಂದ ಅಕ್ರಮವಾಗಿ ಅಕ್ಕಿ ಸಾಗಾಟದ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ವಾರ್ಡನ್ ಹಾಗೂ ಹೊರಗುತ್ತಿಗೆ ನೌಕರನೊಬ್ಬನ ಅಮಾನತ್ತಿಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಹಾಸನ ಜಿಲ್ಲೆ, ಆಲೂರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಕಾಂತರಾಜು ಅಮಾನತ್ತಾದ ವಾರ್ಡನ್. ಕಾಂತರಾಜು ಜೊತೆ ಹೊರಗುತ್ತಿಗೆ ನೌಕರ ಕೃಷ್ಣೇಗೌಡ ಕೂಡ ಅಮಾನತ್ತಾಗಿದ್ದಾರೆ. ನಿಲಯಕ್ಕೆ ಸರ್ಕಾರದಿಂದ ಬಂದಿದ್ದ ಅಕ್ಕಿ ಮೂಟೆಯನ್ನು ರಾತ್ರೋ ರಾತ್ರಿ ಸ್ಕೂಟರ್‌ನಲ್ಲಿ ಅಕ್ರಮವಾಗಿ ಬೇರೆಡೆ ಸಾಗಿಸಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಲಕ್ಷಣೇಗೌಡ ಅವರು ವಾರ್ಡನ್ ಕಾಂತರಾಜುಗೆ ಕಾರಣ ಕೇಳಿ ನೋಟೀಸ್ ನೀಡಿದ್ದರು.
ಈ ಪ್ರಕರ ಕುರಿತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಲಕ್ಷಣೇಗೌಡ ಅವರು, ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ವಾರ್ಡನ್ ಕಾಂತರಾಜು ಹಾಗೂ ಕೃಷ್ಣೇಗೌಡ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.