ಹೊಸದಿಗಂತ ವರದಿ, ಮಡಿಕೇರಿ:
ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಟಿಕೊಪ್ಪ- ಮಾದಾಪುರ ರಸ್ತೆಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹೇರೂರು ಗ್ರಾಮದ ನಿವಾಸಿಗಳಾದ ಹೇಮಂತ್ (23 ) ಮತ್ತು ರಮೇಶ್ (34) ಎಂಬವರೇ ಬಂಧನಕ್ಕೊಳಗಾದವರಾಗಿದ್ದು, ಆರೋಪಿಗಳಿಂದ 150 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಸುಂಟಿಕೊಪ್ಪ-ಮಾದಾಪುರ ರಸ್ತೆಯಲ್ಲಿರುವ ಸ್ಮಶಾನದ ಬಳಿ ಗಾಂಜಾ ಮಾರಾಟವಾಗುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ಎ. ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್.ಕೆ ಮಾರ್ಗದರ್ಶನದಲ್ಲಿ ಸುಂಟೊಕೊಪ್ಪ ಠಾಣಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.