ಎಗ್ಗಿಲ್ಲದೆ ನಡೆಯುತ್ತಿದೆ ಗೃಹ ಬಳಕೆ ಸಿಲಿಂಡರ್‌ಗಳ ಅಕ್ರಮ ದಂಧೆ, ಕಣ್ಮುಚ್ಚಿ ಕುಳಿತ ಆಹಾರ ಇಲಾಖೆ

ಹೊಸದಿಗಂತ ವರದಿ ರಾಯಚೂರು:

ಜಿಲ್ಲೆಯಲ್ಲಿ ಗೃಹ ಬಳಕೆ ಅನಿಲ ಸಿಲಿಂಡರ್‌ಗಳ ಅಕ್ರಮ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಯಾರೂ ಕೇಳೋರಿಲ್ಲದೆ ವಾಣಿಜ್ಯ ಉದ್ದೇಶಗಳಿಗಾಗಿ ಗೃಹ ಬಳಕೆ ಸಿಲಿಂಡರುಗಳ ಅಕ್ರಮ ಬಳಕೆ ಇಂದಿಗೂ ಅವ್ಯಾಹತವಾಗಿ ಮುಂದುವರಿದಿದೆ. ಜಿಲ್ಲಾ ಆಹಾರ ಇಲಾಖೆ ನೆಪ ಮಾತ್ರಕ್ಕೆ ಗೃಹ ಬಳಕೆ ಸಿಲಿಂಡರುಗಳ ಅಕ್ರಮ ಬಳಕೆ ತಡೆಯುವುದಕ್ಕೆ ಕ್ರಮ ಜರುಗಿಸುವುದಕ್ಕೆ ಮುಂದಾಗಿ ಅಷ್ಟಕ್ಕೇ ಸುಮ್ಮನಾಗಿರುವುದು ಬೇಸರದ ಸಂಗತಿ.

ಈ ವಿಚಾರ ಕುರಿತಂತೆ ʻಹೊಸದಿಗಂತ ಪತ್ರಿಕೆʼ ವರದಿ ಪ್ರಕಟಿಸಿದ ನಂತರ ರಾಯಚೂರು ನಗರ ಮತ್ತು ಸಿಂಧನೂರು ತಾಲೂಕಿನ ಕೆಲ ಭಾಗಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದ ಸಿಲಿಂಡರುಗಳನ್ನು ವಶಪಡಿಸಿಕೊಳ್ಳುವ ಕೆಲಸ ನಡೆದಿತ್ತು. ನೆಪಮಾತ್ರಕ್ಕೆ ಈ ಕೆಲಸವಾಗಿದ್ದು, ಮತ್ಯಾವುದೇ ತಾಲೂಕುಗಳಲ್ಲಿ ಕ್ರಮ ಕೈಗೊಂಡ ಕುರುಹುಗಳು ಕಂಡುಬರದಿರುವುದು ದುರಂತ.

ಜಿಲ್ಲಾ ಕೇಂದ್ರ ರಾಯಚೂರು ಸೇರಿದಂತೆ ಜಿಲ್ಲೆಯ ಸಿಂಧನೂರು, ಮಾನ್ವಿ, ಮಸ್ಕಿ, ದೇವದುರ್ಗ, ಲಿಂಗಸುಗೂರು, ಸಿರವಾರ ಸೇರಿದಂತೆ ಹೋಬಳಿ ಮಟ್ಟದಲ್ಲಿಯೂ ಅವ್ಯಾಹತವಾಗಿ ಗೃಹ ಬಳಕೆ ಸಿಲಿಂಡರುಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ರಾಜಾರೋಷವಾಗಿ ಬಳಸಲಾಗುತ್ತಿದೆ. ಅಂಗಡಿ ಮುಗ್ಗಟ್ಟುಗಳಲ್ಲಿ ಅಲ್ಲದೆ ದೊಡ್ಡ ದೊಡ್ಡ ಹೊಟೇಲ್, ಡಾಬಾ, ಚಿಕ್ಕ ಚಿಕ್ಕ ಚಹಾ ಅಂಗಡಿಗಳು, ಲಾಂಡ್ರಿಗಳಲ್ಲಿ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ.

ಸಿಲಿಂಡರ್ ವಿತರಕರ ಕೈವಾಡ ಹೆಚ್ಚು‌

ಈ ದಂಧೆಯಲ್ಲಿ ಸಿಲಿಂಡರ್ ವಿತರಕರು ಪ್ರಮುಖ ಪಾತ್ರ ವಹಿಸಿದ್ದು, ಇವರೇ ವಾಣಿಜ್ಯ ಉದ್ದೇಶಗಳಿಗಾಗಿ ಸಿಲಿಂಡರ್ ವಿತರಿಸುವುದನ್ನು ಕಾಣಬಹುದು.‌ ಅತಿ ಕಡಿಮೆ ಬಳಕೆ ಮಾಡುವ ಗ್ರಾಹಕರನ್ನು ಟಾರ್ಗೆಟ್‌ ಮಾಡಿರುವ ವಿತರಕರು, ಪಲಾನುಭವಿಗಳ ಹೆಸರಲ್ಲಿ ವಿತರಕರೇ ಬುಕ್ ಮಾಡಿ ಸಿಲಿಂಡರುಗಳನ್ನು ಅಕ್ರಮವಾಗಿ ಸರಬರಾಜು ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಸಿಲಿಂಡರ್ ಸಬ್ಸಿಡಿ ಹಣ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಆದ ಮೆಸೇಜ್ ಬಂದಾಗಲೇ ಗ್ರಾಹಕರಿಗೆ ತಮ್ಮ ಹೆಸರಲ್ಲಿ ಸಿಲಿಂಡರ್‌ ರವಾನೆಯಾಗಿರುವುದು ಗೊತ್ತಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!