ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಸರ್ಕಾರದ ಬಹುನಿರೀಕ್ಷಿತ ಯೋಜನೆ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ (Mohalla Clinic) ಕಳಪೆ ಔಷಧಿಗಳ ವಿತರಣೆ, ನಕಲಿ ರೋಗಶಾಸ್ತ್ರ ಮತ್ತು ರೇಡಿಯಾಲಜಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಸಿಬಿಐಗೆ (CBI) ಆದೇಶಿಸಿದೆ.
ಅಕ್ರಮದ ವರದಿ ಹಿನ್ನೆಲೆ ಸಿಬಿಐ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಗುರುವಾರ ಶಿಫಾರಸು ಮಾಡಿದ್ದರು. ಈ ಶಿಫಾರಸು ಆಧರಿಸಿ ಕೇಂದ್ರ ಗೃಹ ಸಚಿವಾಲಯ ಸಿಬಿಐಗೆ ಆದೇಶಿಸಿದೆ.
ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಮೂಲಗಳ ಪ್ರಕಾರ ವೈದ್ಯರ ಅನುಪಸ್ಥಿತಿಯಲ್ಲಿ ಅನಧಿಕೃತ / ವೈದ್ಯಕೀಯೇತರ ಸಿಬ್ಬಂದಿ ರೋಗಿಗಳಿಗೆ ಪರೀಕ್ಷೆಗಳು ಮತ್ತು ಔಷಧಿಗಳನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಲೆಫ್ಟಿನೆಂಟ್ ಗವರ್ನರ್‌ಗೆ ಸಲ್ಲಿಸಿದ ಆರೋಗ್ಯ ಇಲಾಖೆ ವರದಿಯಲ್ಲಿ ರೋಗಿಗಳ ನೋಂದಣಿ ಮತ್ತು ಅವರ ಮೇಲೆ ನಡೆಸಲಾದ ಪ್ರಯೋಗಾಲಯ ಪರೀಕ್ಷೆಗಳಿಗೆ ನಕಲಿ ಮೊಬೈಲ್ ಸಂಖ್ಯೆಗಳನ್ನು ಬಳಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಗಂಭೀರ ಮೋಸ ಪತ್ತೆಯಾದ ಬಳಿಕ ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.