Friday, January 9, 2026

ರಕ್ತಸಂಬಂಧಕ್ಕೆ ಮಸಿ ಬಳಿದ ಅಕ್ರಮ ಪ್ರೇಮ: ಅಣ್ಣನ ಮೋಹಕ್ಕೆ ಬಲಿಯಾದಳೇ ಯುವತಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಕ್ತಸಂಬಂಧದ ಪವಿತ್ರತೆಯನ್ನು ಮರೆತು, ಅಣ್ಣ-ತಂಗಿ ವರಸೆಯವರೇ ಪ್ರೀತಿಸಿ ‘ಲಿವಿಂಗ್‌ ರಿಲೇಷನ್‌ಶಿಪ್‌’ನಲ್ಲಿದ್ದ ಜೋಡಿಯ ಬದುಕು ಈಗ ದುರಂತದಲ್ಲಿ ಅಂತ್ಯಗೊಂಡಿದೆ. ತಂಗಿ ವರಸೆಯ 21 ವರ್ಷದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಿಯಕರ ಅಣ್ಣ ನಾಪತ್ತೆಯಾಗಿದ್ದಾನೆ.

ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿಗಳಾದ ರಾಮಲಕ್ಷ್ಮಿ (21) ಮತ್ತು ಕೃಷ್ಣ (30) ಎಂಬುವವರು ಸಂಬಂಧದಲ್ಲಿ ಅಣ್ಣ-ತಂಗಿ (ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು). ಕಳೆದ ಮೂರು ವರ್ಷಗಳಿಂದ ಇವರಿಬ್ಬರ ನಡುವೆ ಅಕ್ರಮ ಪ್ರೇಮ ಸಂಬಂಧವಿತ್ತು. ಕುಟುಂಬಸ್ಥರು ಮತ್ತು ಸಂಬಂಧಿಕರು ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದ ಈ ಜೋಡಿ, ಪ್ರತ್ಯೇಕವಾಗಿ ವಾಸವಿದ್ದರು.

ಆರೋಪಿ ಕೃಷ್ಣನಿಗೆ ಈ ಮೊದಲೇ ಬೇರೊಬ್ಬ ಯುವತಿಯೊಂದಿಗೆ ಮದುವೆಯಾಗಿತ್ತು. ಆದರೂ ರಾಮಲಕ್ಷ್ಮಿಯ ಮೇಲಿನ ವ್ಯಾಮೋಹ ಬಿಡದ ಆತ, ಆಕೆಯ ತಲೆಕೆಡಿಸಿ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಪ್ರತ್ಯೇಕವಾಗಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಇಬ್ಬರೂ ಅಲ್ಲಿಯೇ ‘ಲಿವಿಂಗ್ ರಿಲೇಷನ್‌ಶಿಪ್’ನಲ್ಲಿದ್ದರು.

ಇಂದು ರಾಮಲಕ್ಷ್ಮಿ ವಾಸವಿದ್ದ ಮನೆಯಲ್ಲಿ ಆಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡರೂ, ಸಾವಿನ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. “ನನ್ನ ತಂಗಿಯ ಸಾವಿಗೆ ಅಣ್ಣ ವರಸೆಯ ಕೃಷ್ಣನೇ ನೇರ ಕಾರಣ” ಎಂದು ಮೃತಳ ಅಕ್ಕ ಗಂಭೀರ ಆರೋಪ ಮಾಡಿದ್ದಾರೆ.

ಘಟನೆ ನಡೆದ ಬೆನ್ನಲ್ಲೇ ಆರೋಪಿ ಕೃಷ್ಣ ನಾಪತ್ತೆಯಾಗಿದ್ದು, ಪೊಲೀಸರ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ. ಸ್ಥಳಕ್ಕೆ ಪೆರೇಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

error: Content is protected !!