ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಮಂಗಳವಾರ ಪ್ರಕಟಿಸಿದ್ದಾರೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಸೋಲನ್, ಶಿಮ್ಲಾ, ಸಿರ್ಮಾವೂರ್, ಕುಲು, ಮಂಡಿ, ಕಿನ್ನೌರ್ ಮತ್ತು ಲಾಹೌಲ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಉನಾ, ಹಮೀರ್‌ಪುರ, ಕಂಗ್ರಾ ಮತ್ತು ಚಂಬಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಮಂಡಿ, ಕಿನ್ನೌರ್, ಲಾಹೌಲ್ ಮತ್ತು ಸ್ಪಿತಿ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಸಂಭವಿಸುವ ಸಾಧ್ಯತೆಯಿದೆ ಎಂದು ಐಎಂಡಿ ವಿಜ್ಞಾನಿ ಸಂದೀಪ್ ಕುಮಾರ್ ಶರ್ಮಾ ಹೇಳಿದ್ದಾರೆ. ಕಳೆದ 50 ವರ್ಷಗಳಲ್ಲಿ ಇಷ್ಟೊಂದು ಭಾರಿ ಮಳೆಯಾಗಿರಲಿಲ್ಲ, ಇದರಿಂದ 4 ಸಾವಿರ ಕೋಟಿ ರೂಪಾಯಿ ಆಸ್ತಿ ಹಾನಿ ಸಂಭವಿಸಿದೆ ಎಂದು ಸಿಎಂ ಸುಖವಿಂದರ್ ಸಿಂಗ್ ಸುಖ್ ಹೇಳಿದ್ದಾರೆ.
ಪ್ರವಾಹದಿಂದ 12 ಸೇತುವೆಗಳು ಹಾನಿಗೀಡಾಗಿದ್ದು, ಹಲವು ನದಿಗಳು ಪ್ರವಾಹದ ನೀರಿನಿಂದ ತುಂಬಿ ಹರಿಯುತ್ತಿವೆ. ಭೂಕುಸಿತದಿಂದ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಹಿಮಾಚಲ ಪ್ರದೇಶದ ವಡಾರಾ ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಸಿಎಂ ಜೊತೆ ಮಾತನಾಡಿದರು. ದೆಹಲಿ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ 42 ಜನರು ಸಾವನ್ನಪ್ಪಿದ್ದಾರೆ.