Monday, November 24, 2025

ಆಪರೇಷನ್ ಸಿಂದೂರ್ ಸಮಯದಲ್ಲಿ ಶ್ರೀಕೃಷ್ಣನ ಸಂದೇಶ ಅನುಕರಣೆ: ರಾಜನಾಥ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತದ ಪ್ರತಿಕ್ರಿಯೆಯು ಶ್ರೀಕೃಷ್ಣ ಪಾಂಡವರಿಗೆ ನೀಡಿದ ಸಂದೇಶದಿಂದ ರೂಪುಗೊಂಡಿದೆ ಎಂದು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ .

ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ಯುದ್ಧವನ್ನು ಎಂದಿಗೂ ಸೇಡು ಅಥವಾ ವೈಯಕ್ತಿಕ ಲಾಭಕ್ಕಾಗಿ ಮಾಡಬಾರದು, ಬದಲಿಗೆ ನ್ಯಾಯ ಮತ್ತು ಸರಿಯಾದ ನಡವಳಿಕೆಯನ್ನು ಎತ್ತಿಹಿಡಿಯಲು ಮಾಡಬೇಕು ಎಂದು ಶ್ರೀಕೃಷ್ಣ ಹೇಳಿದ್ದ. ಅದರಂತೆಯೇ ನಾವು ಕೂಡ ಆಪರೇಷನ್ ಸಿಂದೂರ್ ನಡೆಸಿದೆವು ಎಂದಿದ್ದಾರೆ.

ಪ್ರವಾಸಿಗರ ಧರ್ಮದ ಬಗ್ಗೆ ಕೇಳಿ ನಂತರ ಅವರನ್ನು ಗುರಿಯಾಗಿಸಿಕೊಂಡು ಶೂಟ್ ಮಾಡಿ ಮುಗ್ಧ ಪ್ರವಾಸಿಗರ ಹತ್ಯೆ ನಡೆಸಿದ್ದು ಬಹಳ ಕ್ರೂರ ಮತ್ತು ಅಮಾನವೀಯ ಕೃತ್ಯ ಎಂದು ಅವರು ಟೀಕಿಸಿದರು.

ಆ ಘಟನೆಯು ಭಾರತದ ಶಾಂತಿಪ್ರಿಯ ಸ್ವಭಾವವನ್ನು ಪ್ರಶ್ನಿಸಿದ್ದು ಮಾತ್ರವಲ್ಲ, ಭಯೋತ್ಪಾದಕರು ಮತ್ತು ಅವರ ಬೆಂಬಲಿಗರು ಭಾರತದ ಸಭ್ಯತೆಯೇ ಅದರ ದೌರ್ಬಲ್ಯ ಎಂದು ಭಾವಿಸಿದ್ದರು. ಆದರೆ ಭಾರತವು ಭಗವದ್ಗೀತೆಯ ದೇಶ ಎಂಬುದನ್ನು ಅವರು ಮರೆತಿದ್ದರು. ಭಗವದ್ಗೀತೆ ಯುದ್ಧಭೂಮಿಯಲ್ಲಿ ಕರುಣೆ ಮತ್ತು ಧರ್ಮವನ್ನು ರಕ್ಷಿಸಲು ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.

ಯುದ್ಧ ಸೇಡು ಅಥವಾ ಮಹತ್ವಾಕಾಂಕ್ಷೆಗಾಗಿ ಮಾಡಬಾರದು, ಬದಲಾಗಿ ನೀತಿವಂತ ಆಡಳಿತವನ್ನು ಸ್ಥಾಪಿಸಲು ಯುದ್ಧ ಮಾಡಬೇಕೆಂದು ಶ್ರೀಕೃಷ್ಣ ಪಾಂಡವರಿಗೆ ವಿವರಿಸಿದ್ದನು. ಆಪರೇಷನ್ ಸಿಂದೂರ್ ಸಮಯದಲ್ಲಿ ನಾವು ಶ್ರೀಕೃಷ್ಣನ ಸಂದೇಶವನ್ನು ಅನುಸರಿಸಿದ್ದೇವೆ. ಈ ಕಾರ್ಯಾಚರಣೆಯು ಇಡೀ ಜಗತ್ತಿಗೆ ಭಾರತ ಭಯೋತ್ಪಾದನೆಯ ವಿರುದ್ಧ ಮೌನವಾಗಿರುವುದಿಲ್ಲ ಅಥವಾ ಯಾವುದೇ ಸಂದರ್ಭದಲ್ಲೂ ದುರ್ಬಲವಾಗುವುದಿಲ್ಲ ಎಂಬ ಸಂದೇಶವನ್ನು ನೀಡಿದೆ. ಶ್ರೀಕೃಷ್ಣನು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಧರ್ಮವನ್ನು ಉಪದೇಶಿಸುವುದರಿಂದ ಮಾತ್ರ ರಕ್ಷಿಸಲಾಗುವುದಿಲ್ಲ ಎಂದು ವಿವರಿಸಿದ್ದನು. ಇದು ಕರ್ಮಗಳಿಂದ ರಕ್ಷಿಸಲ್ಪಟ್ಟಿದೆ ಮತ್ತು ಆಪರೇಷನ್ ಸಿಂದೂರ್ ನಾವು ಅಳವಡಿಸಿಕೊಂಡ ಧರ್ಮಾಧಾರಿತ ಕರ್ಮವಾಗಿತ್ತು ಎಂದು ಅವರು ಹೇಳಿದರು.

ಭಾರತ ಯುದ್ಧವನ್ನು ಬಯಸುವುದಿಲ್ಲ. ಆದರೆ ಯುದ್ಧ ಮಾಡಲು ಬಲವಂತಪಡಿಸಿದರೆ ನಾವು ಓಡಿಹೋಗುವುದಿಲ್ಲ. ನಮ್ಮನ್ನು ಕೆಣಕಿದವರಿಗೆ ಸರಿಯಾದ ಉತ್ತರವನ್ನು ನೀಡುತ್ತೇವೆ ಎಂದು ನಾವು ಜಗತ್ತಿಗೆ ತೋರಿಸಿದ್ದೇವೆ. ಆಪರೇಷನ್ ಸಿಂದೂರ್ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಬದಲಾಗಿ ಭಾರತದ ಸ್ವಯಂ ಬದ್ಧತೆ, ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸದ ಘೋಷಣೆಯಾಗಿದೆ ಎಂದು ಎಂದು ಅವರು ಹೇಳಿದರು.

error: Content is protected !!