ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಆರ್ಥಿಕ ವರ್ಷದಲ್ಲೇ ಐದು ಗ್ಯಾರಂಟಿ ಯೋಜನೆ ಜಾರಿಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಈ ವರ್ಷವೇ ಜಾರಿಗೊಳಿಸುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಡಿಸಿಎಂ ಡಿ.ಕೆ ಶಿವಕುಮಾರ್, ಇವತ್ತು ಇಡೀ ರಾಜ್ಯದ ಜನರು ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ನುಡಿದಂತೆ ನಡೆಯುವವರು ನಾವು. ಅಧಿಕಾರ ತೆಗೆದುಕೊಂಡ ಮೊದಲ ದಿನದಿಂದ ಏನು ಮಾತನಾಡಿದ್ದೇವೆ ಆ ಮಾತಿಗೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ಈ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸಿಎಂ ಸಿದ್ಧರಾಮಯ್ಯ ಅವರು, ನಾವು ವಿಧಾನಸಭಾ ಚುನಾವಣೆ ಸಂದರ್ಭಕ್ಕೂ ಮುಂಚೆ ನಮ್ಮ ಪಕ್ಷದ ವತಿಯಿಂದ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ನಾನು ಮತ್ತು ನಮ್ಮ ಅಧ್ಯಕ್ಷರಾದಂತ ಡಿಕೆ ಶಿವಕುಮಾರ್ ಗ್ಯಾರಂಟಿ ಕಾರ್ಡ್ ಗಳಿಗೆ ನಮ್ಮ ಸಹಿ ಕೂಡ ಮಾಡಿದ್ದೆವು. ನಾವು ಗ್ಯಾರಂಟಿಯಾಗಿ, ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದರು.
ನಾವು ಸರ್ಕಾರ ರಚನೆಯಾದ ದಿನದಿಂದ ನಾನು ಸಿಎಂ, ಡಿಸಿಎಂ ಡಿಕೆಶಿವಕುಮಾರ್ ಜೊತೆಗೆ 8 ಜನ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದೆವು. ಅವತ್ತು ಸಂಪುಟ ಸಭೆಯನ್ನು ಮಾಡಿ ತೀರ್ಮಾನ ಮಾಡಿದೆವು. ಐದು ಗ್ಯಾರಂಟಿಗಳನ್ನು ಜಾರಿಗೆ ಕೊಡುತ್ತೇವೆ ಎಂದು ತೀರ್ಮಾನಿಸಲಾಗಿತ್ತು. ಅವತ್ತೇ ತಾತ್ವಿಕ ಆದೇಶವನ್ನು ನೀಡಲಾಗಿತ್ತು. ಅದು ಆದ ಮೇಲೆ ಇವತ್ತು ಸಚಿವ ಸಂಪುಟ ಸಭೆಯನ್ನು ನಡೆಸಲಾಯಿತು. ಇವತ್ತು ಕರೆದಿದ್ದು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಸಂಬಂಧದ ವಿಶೇಷವಾಗಿತ್ತು ಎಂದು ಹೇಳಿದರು.
ನಾವು ಬಹಳ ಸುಧೀರ್ಘವಾಗಿ ಐದು ಗ್ಯಾರಂಟಿಗಳನ್ನು ಚರ್ಚೆ ಮಾಡಿದ್ದೇವೆ. ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ ಐದು ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ಕೊಡಬೇಕು ಎಂಬುದಾಗಿ ತೀರ್ಮಾನ ಮಾಡಿದ್ದೇವೆ. ಅದು ಯಾವುದೇ ಜಾತಿ, ಯಾವುದೇ ಧರ್ಮ, ಯಾವುದೇ ಭಾಷೆ ಇವು ಯಾವುದು ಇಲ್ಲದೆ ಎಲ್ಲಾ ಜಾತಿ, ಧರ್ಮ, ಭಾಷೆಯವರಿಗೆ ಕರ್ನಾಟಕದ ಜನರಿಗೆ, ಜನತೆಗೆ ಈ ಗ್ಯಾರಂಟಿಗಳನ್ನು ತಲುಪಿಸುತ್ತೇವೆ. ಜಾರಿಗೆ ಕೊಡುತ್ತೇವೆ ಎಂದು ತಿಳಿಸಿದರು.