ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಯ (Yuva Nidhi Scheme) ಡಿಸೆಂಬರ್ ತಿಂಗಳಿನಲ್ಲಿ ಜಾರಿಗೊಳಿಸಲಾಗುವುದು ಎಂದು ಸಚಿವ ಕೆ.ಹೆಚ್.ಮುನಿಯಪ್ಪ (K.H.Muniyappa) ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಘೋಷಿಸಿದ ಐದು ಯೋಜನೆಗಳ ಪೈಕಿ ಮೂರು ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ನಾಲ್ಕನೇ ಯೋಜನೆ ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ 30 ರಂದು ಜಾರಿಗೆ ತರಲಾಗುವುದು ಎಂದರು.
ನಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ನಾಲ್ಕನೇ ಭರವಸೆಯಾಗಿರುವ ಗೃಹಲಕ್ಷ್ಮೀ ಯೋಜನೆಯನ್ನು ನಾಳೆ ಜಾರಿಗೊಳಿಸುತ್ತಿದ್ದೇವೆ. ಉದ್ಘಾಟನಾ ಕಾರ್ಯಕ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಡಿಸೆಂಬರ್‌ನಲ್ಲಿ ಯುವ ನಿಧಿ ಯೋಜನೆಯೂ ಜಾರಿಯಾಗಲಿದೆ’ ಎಂದರು.
ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಸಂದರ್ಭದಲ್ಲಿ ಯುವ ನಿಧಿ ಯೋಜನೆಗೆ ಅನುದಾನವನ್ನು ಮೀಸಲಿಟ್ಟಿಲ್ಲ. ಉಳಿದ ನಾಲ್ಕೂ ಯೋಜನೆಗಳಿಗೆ ಹಣ ಮೀಸಲಿಟ್ಟಿದ್ದಾರೆ.
ಕರ್ನಾಟಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯುವ ನಿಧಿ ಯೋಜನೆಯು ಪದವೀಧರರು ಮತ್ತು ಡಿಪ್ಲೋಮಾ ಪೂರ್ಣಗೊಳಿಸಿ ಉದ್ಯೋಗ ಹುಡುಕಾಡುತ್ತಿರುವವರಿಗೆ ಆರ್ಥಿಕ ನೆರವು ನೀಡುವ ಭರವಸೆಯನ್ನು ನೀಡುತ್ತದೆ.ಪದವಿ ಅಥವಾ ಡಿಪ್ಲೊಮಾ ಪದವಿ ಪಡೆದು 6 ತಿಂಗಳಾದರೂ ಉದ್ಯೋಗ ಸಿಗದ ಯುವಕರಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅದರಂತೆ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ 1,500 ರೂ. ನೀಡಲಾಗುತ್ತದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳ ಮೂಲಕ ನೇರವಾಗಿ ಈ ಹಣವನ್ನು ವರ್ಗಾಯಿಸಲಾಗುತ್ತದೆ.