Saturday, October 18, 2025

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ವಿಧಾನ ಸೌಧದಲ್ಲಿ ನಡೆಯಿತು. ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆ ವಿಚಾರದ ಚರ್ಚೆಯ ಜೊತೆಗೆ ಹಲವು ಮಹತ್ವದ ತೀರ್ಮಾನಗಳನ್ನ ಕ್ಯಾಬಿನೆಟ್​ ಸಭೆಯಲ್ಲಿ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025-2032ನ್ನೂ ಸಚಿವ ಸಂಪುಟ ಅಂಗೀಕರಿಸಿದೆ.

ಚಿಕ್ಕೋಡಿಗೆ ಮಂಜೂರಾಗಿದ್ದ 50 ಹಾಸಿಗೆಗಳ ತೀವ್ರ ನಿಗಾ ಘಟಕವನ್ನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ಸ್ಥಳಾಂತರಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.

ಕಟ್ಟಡ ಮತ್ತು ವೈದ್ಯಕೀಯ ಉಪಕರಣಗಳು ಸೇರಿ 23.75 ಕೋಟಿ ರೂಪಾಯಿ ವೆಚ್ಚದಲ್ಲಿ ತೀವ್ರ ನಿಗಾ ಘಟಕ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪ್ರಸ್ತುತ ಇರುವ 60 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ.

ದೆಹಲಿಯ ಕರ್ನಾಟಕ ಭವನ-2 ಕಟ್ಟಡದ ನವೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಂಪುಟ ತೀಮಾರ್ನಿಸಿದ್ದು, 16.30 ಕೋಟಿ ರೂಪಾಯಿ ಮೊತ್ತದಲ್ಲಿ ಕಾಮಗಾರಿಗೆ ನಿರ್ಧರಿಸಲಾಗಿದೆ. 16 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಹೊಸ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಕ್ಯಾಬಿನೆಟ್​​​ ಒಪ್ಪಿಗೆ ಸೂಚಿಸಿದೆ.

error: Content is protected !!