ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವಿತ್ರ ಆಣಿವಾರ ಆಸ್ಥಾನಂ ಪರ್ವದಿನದ ಹಿನ್ನೆಲೆಯಲ್ಲಿ ಜುಲೈ 14 ಮತ್ತು 15ರಂದು ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರಮುಖ ಬದಲಾವಣೆಗಳನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ಪ್ರಕಟಿಸಿದೆ. ಈ ಎರಡು ದಿನಗಳಲ್ಲಿ ಸಾಮಾನ್ಯ ಭಕ್ತರಿಗೆ ನಿರ್ದಿಷ್ಟವಾದ VIP ಬ್ರೇಕ್ ದರ್ಶನವನ್ನು ರದ್ದುಗೊಳಿಸಲಾಗಿದ್ದು, ಪ್ರೋಟೋಕಾಲ್ ಗಣ್ಯರನ್ನು ಹೊರತುಪಡಿಸಿ ಯಾವುದೇ ಶಿಫಾರಸು ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಜುಲೈ 15ರಂದು ದೇವಸ್ಥಾನದಲ್ಲಿ ನಡೆಯಲಿರುವ ಕೋಯಿಲ್ ಆಳ್ವಾರ್ ತಿರುಮಂಜನಂ ಎಂಬ ವಿಶೇಷ ಶುದ್ಧೀಕರಣ ಕ್ರಮಕ್ಕೆ ಪೂರ್ವಭಾವಿಯಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಾಂತ್ರಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಈ ಶುದ್ಧೀಕರಣ ಕಾರ್ಯಕ್ರಮದ ನಂತರ ಜುಲೈ 16ರಂದು ಆಣಿವಾರ ಆಸ್ಥಾನಂ ಉತ್ಸವಗಳು ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ನಡೆಯುವ ದೈನಂದಿನ ಚಟುವಟಿಕೆಗಳು ಮತ್ತು ದರ್ಶನ ಕ್ರಮದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ಈ ನಡುವೆ ತಿರುಮಲದಲ್ಲಿ ಭಕ್ತರ ದಟ್ಟಣೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಜುಲೈ 4ರ ಶುಕ್ರವಾರ ಮಾತ್ರ 70,011 ಭಕ್ತರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅದೇ ದಿನ 28,496 ಮಂದಿ ಮುಡಿ ಸಮರ್ಪಣೆ ಮಾಡಿದ್ದು, ಹುಂಡಿ ಮೂಲಕ ದೇವಸ್ಥಾನಕ್ಕೆ 3.53 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಮತ್ತು ವಾರಾಂತ್ಯದಲ್ಲಿ ಭಕ್ತರ ಹರಿವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸರ್ವದರ್ಶನ ಟೋಕನ್ ಇಲ್ಲದ ಭಕ್ತರು ಕನಿಷ್ಠ 24 ಗಂಟೆಗಳ ಕಾಲ ಕಾಯಬೇಕಾಗುತ್ತದೆ.