ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆಲಮಂಗಲ ತಾಲ್ಲೂಕಿನ ಬೈರಸಂದ್ರ ಗ್ರಾಮದಲ್ಲಿ ಗಂಗರ ಆಳ್ವಿಕೆಯ ಕಾಲಘಟ್ಟಕ್ಕೆ ಸೇರಿದ, ಸುಮಾರು 1,170 ವರ್ಷಗಳಷ್ಟು ಹಳೆಯದಾದ (ಕ್ರಿ.ಶ 850) ಅಪರೂಪದ ಶಾಸನ ಸಹಿತ ‘ಹುಲಿಬೇಟೆ ವೀರಗಲ್ಲು’ ಪತ್ತೆಯಾಗಿದೆ. ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವ ಈ ಅಮೂಲ್ಯ ಐತಿಹಾಸಿಕ ಸ್ಮಾರಕವನ್ನು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸಂರಕ್ಷಿಸಬೇಕು ಎಂದು ಇತಿಹಾಸ ತಜ್ಞರು ಹಾಗೂ ಗ್ರಾಮಸ್ಥರು ತೀವ್ರ ಒತ್ತಾಯ ಮಾಡಿದ್ದಾರೆ.
ಜಮೀನು ಉಳುಮೆ ಮಾಡುವಾಗ ಸಿಕ್ಕ ನಿಧಿ!
ಬೈರಸಂದ್ರ ಗ್ರಾಮದ ನಿವಾಸಿ ರಂಗಸ್ವಾಮಯ್ಯ ಎಂಬುವವರ ಜಮೀನಿನಲ್ಲಿ ವಾಡಿಕೆಯಂತೆ ಉಳುಮೆ ಮಾಡುತ್ತಿದ್ದಾಗ ಈ ಬೃಹತ್ ವೀರಗಲ್ಲು ಪತ್ತೆಯಾಗಿದೆ. ಜಮೀನಿನ ಮಾಲೀಕರು ತಕ್ಷಣವೇ ಅದನ್ನು ಸುರಕ್ಷಿತವಾಗಿ ರಕ್ಷಿಸಿ, ಸ್ಥಳೀಯ ಪತ್ರಕರ್ತರೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಅವರಿಂದ ವಿಷಯ ತಿಳಿದ ಇತಿಹಾಸ ತಜ್ಞರಾದ ಬಾಲಸುಬ್ರಹ್ಮಣ್ಯ, ವೇದಾವತಿ, ಕೆ. ಧನ್‌ಪಾಲ್ ಮತ್ತು ನರೇಂದ್ರ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಇದು ಗಂಗರ ಕಾಲದ ‘ಹುಲಿಬೇಟೆ ವೀರಗಲ್ಲು’ ಎಂಬುದನ್ನು ಖಚಿತಪಡಿಸಿದ್ದಾರೆ.
ಕನ್ನಡ ಶಾಸನದಲ್ಲಿ ಏನಿದೆ?
ಗಂಗರ ಕಾಲದ ಹಳಗನ್ನಡದ ಅಕ್ಷರಗಳಲ್ಲಿ ಕೆತ್ತಲಾಗಿರುವ ಈ ಶಾಸನದಲ್ಲಿ ಒಬ್ಬ ವೀರನ ಸಾಹಸಗಾಥೆಯನ್ನು ದಾಖಲಿಸಲಾಗಿದೆ. “ತ್ತಂಣೀಯರಟ್ಟಮ್ಮರೊಡೆಯನ ಮಗನಾದ ಸಿವಮರೆನಾದಿ ಎಂಬ ವೀರನು, ಅಂದಿನ ಮಣ್ಣೆನಾಡಿನ ನಾಡಗೌಡನಾಗಿದ್ದ ಮಾರಮ್ಮನ್ ಎಂಬುವನ ನಂಬಿಕಸ್ಥ ಸೇವಕನಾಗಿದ್ದನು. ಗ್ರಾಮಕ್ಕೆ ನುಗ್ಗಿದ್ದ ಹುಲಿಯೊಂದರ ದಾಳಿಯಿಂದ ಜನರನ್ನು ರಕ್ಷಿಸಲು ಸಿವಮರೆನಾದಿಯು ಭೀಕರವಾಗಿ ಹೋರಾಡಿ, ಕೊನೆಗೆ ವೀರಮರಣ ಹೊಂದಿದನು” ಎಂಬ ಮಹತ್ವದ ಇತಿಹಾಸವನ್ನು ಈ ಶಾಸನವು ವಿವರಿಸುತ್ತದೆ.
ವೀರಗಲ್ಲಿನಲ್ಲಿರುವ ಅದ್ಭುತ ಕಲಾಕೃತಿ
ಈ ವೀರಗಲ್ಲಿನಲ್ಲಿ ಹಳಗನ್ನಡದ ಬರಹದ ಜತೆಗೆ ಸುಂದರವಾದ ಚಿತ್ರವನ್ನು ಕೆತ್ತಲಾಗಿದೆ. ವೀರ ಸಿವಮರೆನಾದಿಯು ಅಪ್ರತಿಮ ಸಾಹಸದಿಂದ ಹುಲಿಯೊಂದಿಗೆ ಸೆಣಸಾಡುತ್ತಿರುವುದು, ಆತನ ಒಂದು ಕೈಯಲ್ಲಿ ಹುಲಿ ಮತ್ತು ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದಿರುವುದು ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ. ಇದರೊಂದಿಗೆ, ಆತ ವೀರಮರಣ ಹೊಂದಿದ ನಂತರ ದೇವಲೋಕದ ಅಪ್ಸರೆಯರು ಆತನ ಆತ್ಮವನ್ನು ಗೌರವದಿಂದ ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ದೃಶ್ಯವೂ ಈ ಕಲ್ಲಿನಲ್ಲಿದೆ.
ಇದನ್ನೂ ಓದಿ:
ರಕ್ಷಣೆಗೆ ಹೆಚ್ಚಿದ ಒತ್ತಾಯ
ಗಂಗರ ಆಳ್ವಿಕೆಯ ಪ್ರಾಂತ್ಯಗಳಲ್ಲಿ ಶಾಸನಸಹಿತ ಇಂತಹ ಹುಲಿಬೇಟೆ ವೀರಗಲ್ಲುಗಳು ಪತ್ತೆಯಾಗುವುದು ಅತ್ಯಂತ ವಿರಳ. “ನಮ್ಮ ಜಮೀನಿನಲ್ಲಿ ಇಷ್ಟು ಹಳೆಯ ಇತಿಹಾಸವಿರುವ ಸ್ಮಾರಕ ಸಿಕ್ಕಿರುವುದು ನಮಗೆ ಅಚ್ಚರಿ ಮತ್ತು ಹೆಮ್ಮೆ ತಂದಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಇದನ್ನು ಸೂಕ್ತವಾಗಿ ರಕ್ಷಿಸಬೇಕು” ಎಂದು ಜಮೀನಿನ ಮಾಲೀಕ ರಂಗಸ್ವಾಮಯ್ಯ ಹಾಗೂ ಬೈರಸಂದ್ರದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.



