ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದ ಶಕ್ತಿ ಯೋಜನೆ ರಾಜ್ಯದಲ್ಲಿ ಅತ್ಯಂತ ಜನಪ್ರಿಯ ಯೋಜನೆ ಎಂಬ ಹೆಸರನ್ನು ಗಳಿಸಿದ್ದರೆ, ಈಗ ಇದೇ ರೀತಿಯ ಯೋಜನೆಯ ಅನುಭವವನ್ನು ಅಂಧತ್ವ ಹೊಂದಿರುವ ವಿಶೇಷ ಚೇತನರೂ ಬಳಸಬಹುದು. ಕರ್ನಾಟಕ ಸರ್ಕಾರ ಈಗ ಅಂಧರು ರಾಜ್ಯದ ಎಲ್ಲ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಹಿಂದಿನ ವ್ಯವಸ್ಥೆಯಲ್ಲಿ ಅಂಧರು ಯಾವುದೇ ಒಂದು ನಿಗಮದ ಪಾಸ್ ಪಡೆದಿದ್ದರೆ, ಆ ನಿಗಮದ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣ ಸಾಧ್ಯವಾಗುತ್ತಿತ್ತು. ಉದಾಹರಣೆಗೆ, ಬಿಎಂಟಿಸಿ ಪಾಸ್ ಹೊಂದಿರುವವರು ಬಿಎಂಟಿಸಿ ಬಸ್‌ಗಳಲ್ಲಿ ಮಾತ್ರ ಓಡಾಡಬಹುದಿತ್ತು. ಆದರೆ ಕೆಎಸ್‌ಆರ್‌ಟಿಸಿ, ನЕКRTC ಅಥವಾ NWKRTC ಬಸ್‌ಗಳಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಪಡೆಯಬೇಕಾಗುತಿತ್ತು. ಇದರಿಂದಾಗಿ ಅನೇಕ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು.
ಈ ಹಿನ್ನೆಲೆ ಇಂದು ಸಾರಿಗೆ ಇಲಾಖೆ ಹೊಸ ಆದೇಶ ಹೊರಡಿಸಿದೆ. ಅಂಧತ್ವ ಹೊಂದಿರುವವರು ಯಾವುದೇ ನಿಗಮದ ಪಾಸ್ ಹೊಂದಿದ್ದರೂ, ಎಲ್ಲ 4 ನಿಗಮಗಳ ಬಸ್‌ಗಳಲ್ಲಿ ಅಂದರೆ ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ (KSRTC), ನЕКRTC ಮತ್ತು NWKRTC ಯಲ್ಲಿ ಉಚಿತವಾಗಿ ಸಂಚರಿಸಬಹುದು.
ಈ ಆದೇಶವನ್ನು ಸಾರಿಗೆ ಸಚಿವರೇ ನೇರವಾಗಿ ನಾಲ್ಕು ನಿಗಮಗಳಿಗೆ ಜಾರಿಗೆ ತರಲು ಸೂಚಿಸಿದ್ದಾರೆ. ಅವರು ನೀಡಿದ ಮಾಹಿತಿಯಂತೆ, ಶೀಘ್ರದಲ್ಲೇ ಈ ಸೌಲಭ್ಯ ರಾಜ್ಯದಾದ್ಯಂತ ಲಭ್ಯವಾಗಲಿದೆ. ಈ ನಿರ್ಧಾರದಿಂದ ಸುಮಾರು ಲಕ್ಷಾಂತರ ಅಂಧರಿಗೂ ಪ್ರಯೋಜನವಾಗಲಿದೆ.