ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್‌ಗೆ ತೀವ್ರ ಮುಖಭಂಗವಾಗಿದೆ. ಪಾಕಿಸ್ತಾನದ ಚುನಾವಣಾ ಆಯೋಗ ಇಮ್ರಾನ್ ಖಾನ್‌ರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. ಕಾರಣ, ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಇತರ ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರಿಂದ ಪಡೆದ ಸರ್ಕಾರದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಈ ಆರೋಪ ಸುಳ್ಳು ಎಂದು ನಿರೂಪಿಸಿ ಇದಕ್ಕೆ ಸಂಬಂಧಿಸಿದ ವಿವರಗಳನ್ನು ಪ್ರಕಟಿಸುವಲ್ಲಿ ಇಮ್ರಾನ್ ವಿಫಲರಾದರು. ಈ ಕಾರಣಕ್ಕೆ ಚುನಾವಣಾ ಆಯೋಗ ತಮ್ಮ ನಿರ್ಧಾರವನ್ನು ಪ್ರಕಟಿಸಿದೆ. ಚುನಾವಣಾ ಆಯೋಗದ ಈ ನಿರ್ಧಾರದಿಂದ ಇಮ್ರಾನ್ ತಮ್ಮ ಸಂಸತ್ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ.
ಇಮ್ರಾನ್ ಖಾನ್ ಗೆ ಸಂಬಂಧಿಸಿದ ತೋಷಖಾನಾ ಪ್ರಕರಣದ ತನಿಖೆಯನ್ನು ಕೆಲ ದಿನಗಳಿಂದ ನಡೆಸಿರುವ ಪಾಕಿಸ್ತಾನ ಚುನಾವಣಾ ಆಯೋಗ ಶುಕ್ರವಾರ ಅಂತಿಮ ತೀರ್ಪು ನೀಡಿದೆ. ಸ್ಥಳೀಯ ಸಂವಿಧಾನದ ಆರ್ಟಿಕಲ್ 63(1) ಪ್ರಕಾರ, ಇಮ್ರಾನ್ ಐದು ವರ್ಷಗಳ ಕಾಲ ಪ್ರಾಂತೀಯ ಸದಸ್ಯರಾಗಿ ಆಯ್ಕೆಯಾಗಲು ಅನರ್ಹರು ಎಂದು ಘೋಷಿಸಲಾಯಿತು.
ಇಮ್ರಾನ್ ಅವರಿಂದ ತೆರವಾದ ಜಾಗದಲ್ಲಿ ಚುನಾವಣೆ ನಡೆಸಲು ಅನುಮತಿಯನ್ನೂ ನೀಡಿದೆ. ಆದರೆ, ಚುನಾವಣಾ ಆಯೋಗ ನೀಡಿದ ಈ ತೀರ್ಪಿಗೆ ಇಮ್ರಾನ್ ಖಾನ್ ಪರ ವಕೀಲ ಗೋಹರ್ ಖಾನ್ ವಿರೋಧ ವ್ಯಕ್ತಪಡಿಸಿದರು. ಇಮ್ರಾನ್ ಖಾನ್ ಭ್ರಷ್ಟಾಚಾರಿ ಎಂಬುದು ಸಾಬೀತು ಮಾಡಿ ಅವರನ್ನು ಐದು ವರ್ಷಗಳ ಕಾಲ ಅನರ್ಹಗೊಳಿಸಲಾಗಿದೆ. ಆದರೆ ಚುನಾವಣಾ ಆಯೋಗವು ನ್ಯಾಯಾಲಯವಲ್ಲ. ನಾವು ಇದನ್ನು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದರು.