ಹೊಸದಿಗಂತ ವರದಿ ಹಾಸನ :
ಎರಡು ದಿನಗಳಿಂದ ದರುಶನ ನೀಡದ ಸೂರ್ಯ, ಮೋಡಕವಿದ ವಾತವರಣ, ತುಂತೂರು ಮಳೆ, ವೀಪರೀತ ಚಳಿಗೆ ಹಾಸನದಲ್ಲಿ ಫುಲ್ ಕೂಲ್ ಕೂಲ್ ವಾತವರಣ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಎರಡು ದಿನಗಳಿಂದ ಮೋಡಕವಿದ ವಾತಾವರಣ, ತುಂತುರು ಮಳೆಗೆ ಜನರು ತತ್ತರಿಸಿದ್ದಾರೆ. ವಿಪರೀತ ಚಳಿ, ತಂಪನೆಯ ಗಾಳಿ ಬೀಸುತ್ತಿರುವ ಪರಿಣಾಮ ಶೀತ, ನೆಗಡಿ, ಗಂಟಲು ನೋವು, ಜ್ವರದಂತಹ ಸಮಸ್ಯೆಗಳು ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಮತ್ತು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತೆ ಮಾಡಿದೆ. ಮೋಡಕವಿದ ವಾತಾವರಣದಿಂದ ಹೆಚ್ಚಿದ ಚಳಿಗೆ ಸಾರ್ವಜನಿಕರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರೆ, ವೃದ್ಧರು, ಮಕ್ಕಳು, ಗರ್ಭಿಣಿಯರೂ ಸೇರಿದಂತೆ ರೋಗಿಗಳು ಶೀತ ಜ್ವರದಂತಹ ಕಾಯಿಲೆಗಳಿಗೆ ತಲ್ಲಣಿಸಿದ್ದಾರೆ.
ಬುಧವಾರದಿಂದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ದರ್ಶನ ನೀಡದ ಸೂರ್ಯನಿಂದ ಬೆಳಗ್ಗೆ ೫ ಗಂಟೆಯಾದರೂ ಮಂಜು ಮುಸುಗಿದ ವಾತಾವರಣ ಎಲ್ಲೆಡೆ ಆವರಿಸಿಕೊಂಡಿರುತ್ತದೆ. ಬೆಳಗಿನ ಜಾವ ವಾಕಿಂಗ್ ಹೋಗುವವರು ಚಳಿಗೆ ಸ್ವೇಟರ್ ಟೋಪಿ ಧರಿಸಿ ವಾಕ್ ಮಾಡಿದರೆ ಇನ್ನೂ ಕೆಲವರು ಮನೆಯಿಂದ ಆಚೆ ಬಾರದೆ ಮನೆಯಲ್ಲಿಯೆ ಇದ್ದು ಚಳಿ ಮುಗಿದ ನಂತರ ವಾಕ್ ಹೋದರಾಯಿತೆಂದು ಬಿಸಿ ಕಾಫಿ, ಟೀ ಕುಡಿದು ಪತ್ರಿಕೆ ಹಾಗೂ ಟಿವಿ ನೋಡುತ್ತ ಕಾಲ ಕಳೆಯುತ್ತಿದ್ದಾರೆ.
ಮಂಜು ಮುಸುಕಿದ ವಾತಾವರಣ: ಕಳೆದ ಎರದು ದಿನಗಳಿಂದ ತುಂತೂರು ಮಳೆಯೊಂದಿಗೆ ಚಳಿಯ ವಾತವರಣ ಮುಂದುವರಿದಿದ್ದು, ಈ ನಡುವೆ ಅನಾರೋಗ್ಯ ಪೀಡಿತರಿಗೆ ಆತಂಕ ಶುರುವಾಗಿದೆ. ಮೋಡ ಕವಿದ ವಾತಾವರಣದಲ್ಲಿ ಮಂಜು ಮುತ್ತು ಉದುರಿದಂತೆ ಬೀಳುತ್ತಿರುವ ತುಂತುರು ಮಳೆ. ಚುಮು ಚುಮು ಚಳಿಗೆ ಮುದುಡಿ ಓಡಾಡುತ್ತಿರುವ ಜನ. ಡೆಂಗೆ, ಮಲೇರಿಯಾದಂತಹ ರೋಗಗಳು ಸಾಮಾನ್ಯವಾಗಿದ್ದು ಇದೀಗ ಚಳಿ, ಮಳೆಗೆ ವಿಷಮಶೀತ ಜ್ವರ, ನೆಗಡಿಯಂತಹ ಕಾಯಿಲೆಗಳಿಗೆ ರೋಗಿಗಳು ಸೇರಿದಂತೆ ವೃದ್ಧರು, ಮಕ್ಕಳು, ಗರ್ಭಿಣಿಯರೂ ಆತಂಕಕ್ಕೆ ಒಳಗಾಗಿದ್ದಾರೆ.
ಸೇಟರ್, ಟೋಪಿ ಇಲ್ಲದೇ ಮನೆಯಿಂದ ಹೊರಬರಲಾರದ ವಾತಾವರಣ ನಿರ್ಮಾಣವಾಗಿದ್ದು, ಬೆಳಗ್ಗೆ ಮತ್ತು ಸಂಜೆ ವಾಹನಗಳ ಸಂಚಾರಕ್ಕೆ ಸಹಅಡಚಣೆಯಾಗುತ್ತಿದೆ. ರಸ್ತೆ ಸರಿಯಾಗಿ ಕಾಣದ ಪರಿಣಾಮ ಭಾರಿ ಗಾತ್ರದ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದರೆ, ಸಾರಿಗೆ ಬಸ್‌ಗಳ ಚಾಲಕರು ಇದೇ ಪರಿಸ್ಥಿತಿ ಎದುರಿಸುತ್ತಿದ್ದು, ನಿಗದಿತವಾಹನ ಸವಾರರು ಬಸ್ ಹಾಗೂ ಆಟೋ ಹಿಡಿದು ಸಂಚಾರ ಮಾಡುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಸ್ವೆಟರ್ ಇಲ್ಲದೆ ಮತ್ತು ಬಿಸಿ ನೀರಿನ ಬಾಟಲಿ ಇಲ್ಲದೆ ಕಳುಹಿಸುತ್ತಿಲ್ಲ. ಆಟೋ ಹಾಗೂ ವಾಹನ ಚಾಲಕರು ಟೋಪಿ ಜತೆಗೆ ಬೆಚ್ಚನೆಯ ಉಡುಗೆಗಳೊಂದಿಗೆ ವಾಹನ ಚಾಲನೆ ಮಾಡುವುದು ನಗರದಲ್ಲಿ ಸರ್ವೇ ಸಾಮಾನ್ಯವಾಗಿದೆ.
ಚಳಿಗಾಲದಲ್ಲಿ ಮಕ್ಕಳು ಹಾಗೂ ವೃದ್ಧರು ಮತ್ತು ಮಹಿಳೆಯರು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಸಾಧ್ಯವಾದಷ್ಟು ಬೆಚ್ಚನೆಯ ಉಡುಪುಗಳನ್ನು ಧರಿಸುವುದು ಒಳ್ಳೆಯದು. ಶೀತ, ಜ್ವರ ಕಾಣಿಸಿಕೊಂಡರೆ ಆರಂಭದಲ್ಲಿಯೇ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂಬುದು ವೈದ್ಯರ ಸಲಹೆಯಾಗಿದೆ.