ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವರ ಕಾರ್ಯಕ್ಕೆ ಮಾಡಿದ್ದ ಮಾಂಸಾಹಾರ ಸೇವಿಸಿದ ಬಳಿಕ ವಾಂತಿ ಭೇದಿಯಾಗಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಲಿಂಗಸುಗೂರು ತಾಲೂಕಿನ ಪರಂಪೂರ ತಾಂಡದಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನದ ಊಟದ ಬಳಿಕ ಸಂಜೆ ವೇಳೆಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಮಕ್ಕಳು ಹಿರಿಯರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು ಸುಮಾರು 10 ಜನರಿಗೆ ವಾಂತಿ ಭೇದಿಯಿಂದ ನಿರ್ಜಲೀಕರಣವಾಗಿದೆ. ತೀವ್ರ ಅಸ್ವಸ್ಥಗೊಂಡ 10 ಜನರನ್ನ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಗ್ರಾಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಕಲುಷಿತ ಆಹಾರ ಸೇವನೆಯೇ ತಾಲ್ಲೂಕಿನ ಗದ್ಲರತಾಂಡಾ ನಿವಾಸಿಗಳಲ್ಲಿ ವಾಂತಿ ಭೇದಿ ಕಾಣಿಸಿಕೊಳ್ಳಲು ಕಾರಣ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ, ಡಾ. ವಿಕ್ರಮ ಪಾಟೀಲ, ಡಾ. ಅಭಿಜಿತ್ ನಾಯಕ ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ಪರಿಶೀಲಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಪಾಟೀಲ ಮಾಕಾಪುರ ಮಾತನಾಡಿ, ‘ತಾಂಡಾಕ್ಕೆ ವೈದ್ಕಕೀಯ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದೆ. ಕಲಷಿತ ಆಹಾರ ಸೇವನೆಯಿಂದಾಗಿ ವಾಂತಿ ಕಾಣಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆಹಾರ ಮಾದರಿ ಪಡೆದು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದೆ’ ಎಂದು ತಿಳಿಸಿದರು.