ಹೊಸದಿಗಂತ ಮಡಿಕೇರಿ:
ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆಗಳು ಕಾಣಿಸಿಕೊಂಡಿವೆ.
ಭಾನುವಾರ ಮುಂಜಾನೆ 5.45ರ ಸುಮಾರಿಗೆ ಗ್ರಾಮ ಪಂಚಾಯಿತಿ ಬಳಿ ಇರುವ ಸಾವಿತ್ರಿ ಎಂಬವರ ತೋಟದ ಮೂಲಕ ಬಂದ ಕಾಡಾನೆಯೊಂದು ಆಗ ತಾನೇ ಮಸೀದಿಗೆ ತೆರಳಿ ನಮಾಜ್ ಮುಗಿಸಿ ಬರುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಆದರೆ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅವರ ಕಾರನ್ನು ಜಖಂಗೊಳಿಸಿ ತೋಟದೊಳಗೆ ಕಣ್ಮರೆಯಾದಂತೆ ಅದೇ ಮಾರ್ಗದಲ್ಲಿ ಮತ್ತೊಂದು ಕಾಡಾನೆ ಕಾಣಿಸಿಕೊಂಡಿದೆ.
ದಿಢೀರ್ ಆಗಿ ಕಾಣಿಸಿಕೊಂಡ ಕಾಡಾನೆಗಳಿಂದ ಈ ಭಾಗದ ಜನ ಭಯಭೀತರಾದರು. ಎರಡು ಕಾಡಾನೆಗಳ ಪೈಕಿ ಒಂದು ಆನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.