ಹೊಸ ದಿಗಂತ ವರದಿ, ವಿಜಯಪುರ:
ಪಕ್ಷದ ಹಿತ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಯಾರು ಮಾತಾಡಬಾರದು ಎಂದು ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಭವಿಷ್ಯದ ದೃಷ್ಟಿಯಿಂದ ಯತ್ನಾಳ ಒಳ್ಳೆಯ ಕೆಲಸ ಮಾಡಿದ್ದಾರೆ. ಯತ್ನಾಳ ಅವರು ಹಿರಿಯರಿದ್ದಾರೆ. ಅವರ ಬಗ್ಗೆ ನಾನು ಮಾತನಾಡಲ್ಲ. ಯಡಿಯೂರಪ್ಪ ಒಬ್ಬ ಧೀಮಂತ ನಾಯಕ, ರೈತ ನಾಯಕ, ಒಬ್ಬ ಹೋರಾಟಗಾರ ಆಗಿದ್ದಾರೆ. ಅವರಿಗೆ ಕಲ್ಲನ್ನು ಎಸೆದರೆ ಅದು ಪಕ್ಷಕ್ಕೆ ಹೊಡೆತ ಬೀಳುತ್ತದೆ. ಇದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ಎನೇ ಸಮಸ್ಯೆ ಇದ್ದರೂ ಕುಳಿತು ಬಗೆಹರಿಸಿಕೊಳ್ಳಬೇಕು ಎಂದರು.
ನಾನಂತೂ ಇನ್ನೂ ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವೆ. ನನಗೆ ಅವರ ಬಗ್ಗೆ ವೈಯಕ್ತಿಕವಾದ ಯಾವುದೇ ವಿರೋಧಗಳಿಲ್ಲ. ನಮ್ಮ ಹೇಳಿಕೆಗಳು ಪಕ್ಷದ ಬೆಳವಣಿಗೆಗೆ ಪೂರಕವಾಗಿರಬೇಕು. ಮುಂದಿನ ದಿನಗಳಲ್ಲಿ ಪಕ್ಷ ಬಲಪಡಿಸಿ ಅಧಿಕಾರಕ್ಕೆ ತರುವ ನಿಟ್ಟಿನಲಿ ಎಲ್ಲರೂ ಪ್ರಯತ್ನಿಸಬೇಕು ಎಂದರು.
ಮುಂದಿನ ಚುನಾವಣೆಯಲ್ಲಿ ಹೈಕಮಾಂಡ್ ಏನೆ ಕೆಲಸ ನೀಡಿದ್ರೂ ಮಾಡುತ್ತೇನೆ. ಚುನಾವಣೆ ಎದುರಿಸಲು ನಾನು ಸಿದ್ಧನಾಗಿದ್ದೇನೆ. ಹೀಗಾಗಿ ಬರುವ ಚುನಾವಣೆಗೆ ಅಖಾಡಕ್ಕೆ ಇಳಿಯುತ್ತೇನೆ ಎಂದರು.