ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ 6 ಲಕ್ಷದ 57 ಸಾವಿರದ 660 ಕೋಟಿ ರೂಪಾಯಿ ಮೊತ್ತದ ಹೂಡಿಕೆಯ 115 ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದ್ದು, ಇದರಿಂದ 2 ಲಕ್ಷದ 32 ಸಾವಿರದ 771 ಮಂದಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಗಳಲ್ಲಿ 906 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಇದರಿಂದ ಒಂದು ಲಕ್ಷದ 13 ಸಾವಿರದ 200 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 2 ಲಕ್ಷದ 23 ಸಾವಿರದ 982 ಮಂದಿಗೆ ಉದ್ಯೋಗ ಲಭ್ಯವಾಗಲಿದೆ ಎಂದು ಹೇಳಿದರು.
ಈ ವರ್ಷದ ಫೆಬ್ರವರಿಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕದಲ್ಲಿ 98 ಕಂಪನಿಗಳು 6 ಲಕ್ಷದ 23 ಸಾವಿರದ 920 ಕೋಟಿ ರೂಪಾಯಿ ಹೂಡಿಕೆ ಒಪ್ಪಂದ ಮಾಡಿಕೊಂಡಿವೆ. ಈಗಾಗಲೇ ನಾಲ್ಕು ಲಕ್ಷ 3 ಸಾವಿರದ 533 ಕೋಟಿ ರೂಪಾಯಿ ಹೂಡಿಕೆ ಮಾಡಲು ಸಾವಿರದ 101 ಕಂಪನಿಗಳು ಸಂಬಂಧಿಸಿದ ವಿವಿಧ ಸಮಿತಿಗಳಿಂದ ಅನುಮೋದನೆ ಪಡೆದಿವೆ. ಈ ಯೋಜನೆಗಳಿಂದ ಸುಮಾರು 6 ಲಕ್ಷ ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದ್ದು, ಇವುಗಳ ಪೈಕಿ 75ರಷ್ಟು ಬೆಂಗಳೂರಿನ ಹೊರಗೆ ಅದರಲ್ಲೂ ಶೇಕಡ 45ರಷ್ಟು ಉತ್ತರ ಕರ್ನಾಟಕ ಮಂದಿಗೆ ಉದ್ಯೋಗ ದೊರೆಯಲಿದೆ ಎಂದರು.
ರಾಜ್ಯದಲ್ಲಿ ಏಳೂವರೆ ಲಕ್ಷ ಕೋಟಿ ಹೂಡಿಕೆ ಆಕರ್ಷಿಸಲು ಹಾಗೂ 20 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ 2025-30 ಹೊಸ ಕೈಗಾರಿಕಾ ನೀತಿ ಹೊರತರಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಹಲವು ಬಂಡವಾಳ ಹೂಡಿಕೆ ಒಪ್ಪಂದ ನೀಡಲಾಗಿದೆ ಎಂದು ತಿಳಿಸಿದರು. ಡಾಬಸ್ ಪೇಟೆ – ದೊಡ್ಢಬಳ್ಳಾಪುರ ರಸ್ತೆಯಲ್ಲಿ 40 ಸಾವಿರ ಕೋಟಿ ರೂಪಾಯಿ ಹೂಡಿಕೆಯಲ್ಲಿ 5 ಸಾವಿರ ಎಕರೆ ಪ್ರದೇಶದಲ್ಲಿ ಜ್ಞಾನ, ಯೋಗ ಕ್ಷೇಮ ಮತ್ತು ನಾವೀನ್ಯತೆ ನಗರ–ಕ್ವೀನ್ಸ್ ಸಿಟಿ ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾಲಯ ಶೇಕಡ 50:50ರ ಅನುಪಾತದಲ್ಲಿ 9 ರೈಲ್ವೆ ಮಾರ್ಗಗಳು ಪ್ರಗತಿಯಲ್ಲಿದ್ದು, ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಸಭೆ ನಡೆಸಲಾಗಿದೆ ಎಂದು ಅವರು ಹೇಳಿದರು.