ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರು ಹಚ್ಚ ಹಸುರಾಗಿ ಕಾಣಿಸುತ್ತದೆ, ಕೆರೆಗಳ ತುಂಬಿ ನಿಂತಿವೆ, ಬೆಳ್ಳಂಬೆಳಗ್ಗೆ ಆಫೀಸಿಗೆ ಹೋಗುವವರು ಬಸ್‌ನ ವಿಂಡೋ ಸೀಟ್‌ನಲ್ಲಿ ಕೂತು ಮಳೆಯನ್ನು ಆನಂದಿಸುತ್ತಿದ್ದಾರೆ. ಗಾಡಿಯಲ್ಲಿ ಆಫೀಸ್‌ಗೆ ಹೋಗುವವರು ಮಳೆಯನ್ನು ಶಪಿಸುತ್ತಾ ಬ್ರೇಕ್ ಹಾಕಿಕೊಂಡು ನಿಧಾನಕ್ಕೆ ಹೋಗುತ್ತಿದ್ದಾರೆ..
ಹೌದು, ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಕಳೆದ ಮೂರು ದಿನದಿಂದ ಮಳೆಯಾಗುತ್ತಿದ್ದು, ಜನರ ಬ್ಯುಸಿ ಓಡಾಟದ ಸ್ಪೀಡ್ ಜೀವನಕ್ಕೆ ಸಣ್ಣ ಬ್ರೇಕ್ ಸಿಕ್ಕಂತಾಗಿದೆ. ಸರ್ಕಾರಿ ಶಾಲೆ ಮಕ್ಕಳು ಮಳೆಯ ಜೊತೆ ಆಟವಾಡುತ್ತಾ, ಮನೆಯಲ್ಲಿ ಬೆಚ್ಚಗೆ ಕುಳಿತು ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದರೆ, ಪ್ರೈವೇಟ್ ಶಾಲೆಯ ಮಕ್ಕಳಿಗೆ ನಿನ್ನೆಯಿಂದಲೇ ಶಾಲೆ ಶುರುವಾಗಿದೆ.
ಬೆಂಗಳೂರು ನಗರ- ಗ್ರಾಮಾಂತರ ಭಾಗದಲ್ಲಿ ಮುಂಜಾನೆಯೂ ಮಳೆ ಮುಂದುವರೆದಿದೆ. ಮಳೆಯಿಂದಾಗಿ ಕೆಲಸ- ಕಾಲೇಜಿಗೆ ಹೋಗುವವರು, ವಾಹನ ಸವಾರರು ಪರದಾಡುತ್ತಿದ್ದಾರೆ. ಆಗ್ನೇಯ ಬಂಗಾಳ ಮಹಾಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಹವಾಮಾನ ಇಲಾಖೆಯಿಂದ ಇಂದು (ಮಂಗಳವಾರ) – ನಾಳೆ (ಬುಧವಾರ) ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅ.17ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ