ರಾಜ್ಯದ ಅಭಿವೃದ್ಧಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ವರದಿ, ಬಳ್ಳಾರಿ:

ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಪರಿಹಾರಕ್ಕೆ, ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು, ಶೀಘ್ರದಲ್ಲೇ ನಾವು ಹಾಗೂ ತೆಲಂಗಾಣ, ಆಂಧ್ರಪ್ರದೇಶ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ತೋರಣಗಲ್ಲು ವಿಮಾನ ನಿಲ್ದಾಣದ ಬಳಿ ಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಕುರಿತು ಈಗಾಗಲೇ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಡಿಪಿಆರ್ ಸಿದ್ಧಪಡಿಸುವ ಕಾರ್ಯ ನಡೆದಿದೆ ಎಂದರು.

ಅಂಗನವಾಡಿ ಕೇಂದ್ರಗಳಲ್ಲೇ ಎಲ್.ಕೆ. ಜಿ, ಯು.ಕೆ.ಜಿ. ಪ್ರಾರಂಭಿಸಬೇಕು ಎಂದು ಅಂಗನವಾಡಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಎರಡು ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವೆ ಎಂದರು.

ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಪೆಟ್ರೋಲ್, ಡೀಸೆಲ್ ಪ್ರತಿ ಲೀ.3 ರೂ.ಹೆಚ್ಚಳ ಮಾಡಿದ್ದು, ವಿರೋಧ ಪಕ್ಷದವರು ಪ್ರತಿಭಟನೆಗೆಳಿದಿದ್ದಾರೆ. ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ 72 ರೂ. ಇದ್ದ ಪೆಟ್ರೋಲ್ ಬೆಲೆ ಇಂದು 102 ಆಗಿದೆ, ಅವರನ್ನು ಪ್ರಶ್ನೆ ಮಾಡುವುದನ್ನು ಬಿಟ್ಟು ನಮ್ಮನ್ನೇ ಕೇಳ್ತೀರಿ ಎಂದು ಮಾಧ್ಯಮದವರೊಂದಿಗೆ ಸಿಡಿಮಿಡಿಗೊಂಡರು. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕ್ರೂಡ್ ಆಯಿಲ್ 113 ರೂ. ಇತ್ತು, 2015 ರಲ್ಲಿ 50 ರೂ.ಗೆ ಇಳಿಯಿತು ಆವಾಗ ಬಿಜೆಪಿ ಅವರು ಏಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೆ 2024-25 ಸಾಲಿಗೆ 60 ಸಾವಿರ ಕೋಟಿ ಬೇಕು ಎಲ್ಲಿಂದ ತರಬೇಕು, ವಿರೋಧ ಮಾಡುವ ಬಿಜೆಪಿ ಅವರು ಗ್ಯಾರಂಟಿಗಳನ್ನು ಬಂದ್ ಮಾಡಿ ಎಂದು ಹೇಳಲಿ ನೋಡೋಣ. 3 ರೂ. ಅಷ್ಟೇ ನಾವು ಏರಿಕೆ ಮಾಡಿದ್ದು, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಡಿಮೆಯಿದೆ ಎಂದರು.

ಸಂಡೂರಿನ ದೇವಗಿರಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಮೊದಲು ಕುಮಾರಸ್ವಾಮಿ ಅವರೇ ಇದಕ್ಕೆ ವಿರೋಧ ಮಾಡಿದ್ರು, ಈಗ ಅವರೇ ಗಣಿಗಾರಿಕೆಗೆ ಅವಕಾಶ ಅಂದ್ರೆ ಏನರ್ಥ ಈ ಕುರಿತು ಅವರನ್ನೇ ಕೇಳಿ ಎಂದು ಜಾರಿಕೊಂಡರು.

ಈ ಸಂದರ್ಭದಲ್ಲಿ ಸಚಿವರಾದ ಸಂತೋಷ್ ಲಾಡ್, ಜಮೀರ್ ಅಹ್ಮದ್ ಖಾನ್, ಮಾಜಿ ಸಚಿವ ಬಿ.ನಾಗೇಂದ್ರ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!