Tuesday, December 30, 2025

ಭಾರತೀಯ ಸೇನೆಗೆ ಹೆಚ್ಚಿದ ಬಲ: 120 ಕಿ.ಮೀ ವ್ಯಾಪ್ತಿಯ ಪಿನಾಕಾ ರಾಕೆಟ್‌ ಹಾರಾಟ ಪರೀಕ್ಷೆ ಯಶಸ್ವಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಕ್ಷಣಾ ಸ್ವಾಧೀನ ಮಂಡಳಿ ಸೋಮವಾರ ಬೆಳಗ್ಗೆ ಸಭೆ ನಡೆಸಿದ ಬಳಿಕ ಭಾರತೀಯ ಸೇನೆಯು ಒಡಿಶಾದ ಚಾಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್ ನ ಮೊದಲ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. 120 ಕಿ.ಮೀ ವ್ಯಾಪ್ತಿಯ ಈ ರಾಕೆಟ್‌ನ ಮೊದಲ ಪ್ರಯೋಗದಲ್ಲಿ ಅದು ತನ್ನ ಸಂಪೂರ್ಣ ಕುಶಲತೆಯನ್ನು ಪ್ರದರ್ಶಿಸಿದೆ.

ಪರೀಕ್ಷೆಯಲ್ಲಿ ಪಿನಾಕಾ ರಾಕೆಟ್‌ ತನ್ನ ಗರಿಷ್ಠ ಮಿತಿ 120 ಕಿ.ಮೀ ತಲುಪುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ರಾಕೆಟ್‌ ಹಾರಾಟದ ವೇಳೆಯ ತನ್ನ ಎಲ್ಲಾ ಕುಶಲತೆಯನ್ನು ಯಶಸ್ವಿಯಾಗಿ ಪ್ರದರ್ಶನ ಮಾಡಿದೆ. ರಾಕೆಟ್‌ ಟ್ರ್ಯಾಕಿಂಗ್‌ ಉಪಕರಣಗಳು ಕೂಡ ಕರಾರುವಕ್ಕು ಕೆಲಸ ಮಾಡಿದ್ದು, ಈ ಪ್ರಯೋಗವನ್ನು ಐಟಿಆರ್ ಮತ್ತು ಪ್ರೂಫ್ & ಎಕ್ಸ್‌ಪರಿಮೆಂಟಲ್ ಎಸ್ಟಾಬ್ಲಿಷ್‌ಮೆಂಟ್ ಸಂಯೋಜಿಸಿತ್ತು.

ಪಿನಾಕಾ ಮಲ್ಟಿಪಲ್ ಲಾಂಚರ್ ರಾಕೆಟ್ ಸಿಸ್ಟಮ್ (ಎಂಎಲ್‌ಆರ್‌ಎಸ್) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಇದು ದೀರ್ಘ ಶ್ರೇಣಿಯ ಫಿರಂಗಿ ಶಸ್ತ್ರವಾಗಿದೆ ಇದನ್ನು ಆರ್ಮಮೆಂಟ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿಯು ವಿನ್ಯಾಸಗೊಳಿಸಿದ್ದು, ಇದರ ಹಾರಾಟ ಪರೀಕ್ಷೆಗೆ ಐಟಿಆರ್ ಮತ್ತು ಪ್ರೂಫ್ ಆಂಡ್ ಎಕ್ಸ್‌ಪರಿಮೆಂಟಲ್ ಎಸ್ಟಾಬ್ಲಿಷ್‌ಮೆಂಟ್ ಸಹಯೋಗ ನೀಡಿದೆ.

ತ್ವರಿತ ಪ್ರತಿಕ್ರಿಯೆ ಮತ್ತು ನಿಖರತೆಗೆ ಹೆಸರುವಾಸಿಯಾದ ಪಿನಾಕಾ ವ್ಯವಸ್ಥೆಯು ಆಧುನಿಕ ಯುದ್ಧ ಮಾದರಿಯಲ್ಲಿ ಭಾರತೀಯ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಪಿನಾಕಾ ಲಾಂಚರ್‌ನಿಂದ ಉಡಾವಣೆ ಮಾಡಲಾದ ಈ ರಾಕೆಟ್ ಅದರ ಬಹುಮುಖತೆಯನ್ನು ಪ್ರದರ್ಶಿಸಿದ್ದು, ಒಂದೇ ಲಾಂಚರ್‌ನಿಂದ ವಿಭಿನ್ನ ಶ್ರೇಣಿಗಳ ಪಿನಾಕಾ ರೂಪಾಂತರಗಳ ಉಡಾವಣಾ ಸಾಮರ್ಥ್ಯವನ್ನು ತೋರಿಸಿತ್ತು.

ಪಿನಾಕಾ ರಾಕೆಟ್ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಸಾಧನೆಗಾಗಿ ಡಿಆರ್‌ಡಿಒಗೆ ಅಭಿನಂದನೆ ಸಲ್ಲಿಸಿದ್ದಾರೆ.ದೀರ್ಘ ಶ್ರೇಣಿಯ ಮಾರ್ಗದರ್ಶಿ ರಾಕೆಟ್‌ ಆಗಿರುವ ಪಿನಾಕಾ ರಾಕೆಟ್ ಪ್ರಯೋಗ ಯಶಸ್ವಿಯಿಂದ ಇದು ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ವೃದ್ಧಿಸಲಿದೆ ಮತ್ತು ಇದೊಂದು ಗೇಮ್-ಚೇಂಜರ್ ಎಂದು ಹೇಳಿದ್ದಾರೆ.

error: Content is protected !!