ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗುತ್ತಿರುವ ಬೆನ್ನಿಗೇ ಕಾಸರಗೋಡು ಜಿಲ್ಲೆಯಲ್ಲಿಯೂ ಆತಂಕ ಹೆಚ್ಚುತ್ತಿದ್ದು, ವೈರಸ್ ತಡೆಗೆ ಅಗತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಡಳಿತ ಸಜ್ಜಾಗಿದೆ. ಜಿಲ್ಲೆಯ ಗಡಿ ಭಾಗಗಳಲ್ಲಿ ನಿಗಾ ಇನ್ನಷ್ಟು ಹೆಚ್ಚಿಸಲಾಗಿದೆ.
ಸಧ್ಯ ಕಾಸರಗೋಡು ಜಿಲ್ಲೆಯಲ್ಲಿ 27 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ರೂಪಾಂತರಿ ಜೆಎನ್ 1 ಕಾಲಿಟ್ಟಿಲ್ಲವಾದರೂ, ಆತಂಕ ಮಾತ್ರ ಇದ್ದೇ ಇದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಆರೋಗ್ಯ ಇಲಾಖೆ ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಿಸಲು ನಿರ್ಧರಿಸಿದೆ. ಈ ನಡುವೆ ಕೇರಳ ರಾಜ್ಯದಲ್ಲಿ ಕೋವಿಡ್ ರೂಪಾಂತರಿಯ ಕಾಟ ಹೆಚ್ಚುತ್ತಿದ್ದು, ಇದುವರೆಗೆ 293 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.