ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಈಗಾಗಲೇ ಜಯ ಸಾಧಿಸಿರುವ ಆಸ್ಟ್ರೇಲಿಯಾ, ಕೊನೆಯ ಪಂದ್ಯಕ್ಕೂ ಮುನ್ನ ತನ್ನ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಎರಡನ್ನು ಗೆದ್ದುಕೊಂಡಿರುವ ಆಸ್ಟ್ರೇಲಿಯಾ, ಮೂರನೇ ಪಂದ್ಯವನ್ನು ಕೇವಲ ಔಪಚಾರಿಕ ಪಂದ್ಯವಾಗಿ ಪರಿಗಣಿಸಿದ್ದು, ಈ ಹಿನ್ನೆಲೆಯಲ್ಲಿ ಹೊಸ ಆಟಗಾರರಿಗೆ ಅವಕಾಶ ನೀಡಿದೆ.
ಅಕ್ಟೋಬರ್ 25 ರಂದು ನಡೆಯಲಿರುವ ಅಂತಿಮ ಏಕದಿನ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದಲ್ಲಿ ಜ್ಯಾಕ್ ಎಡ್ವರ್ಡ್ಸ್ ಮತ್ತು ಮ್ಯಾಟ್ ಕುನ್ಹೆಮನ್ ಅವರಿಗೆ ಅವಕಾಶ ನೀಡಲಾಗಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಈ ಸರಣಿಯ ನಂತರ ಅಕ್ಟೋಬರ್ 29ರಿಂದ ಆರಂಭವಾಗುವ ಐದು ಪಂದ್ಯಗಳ ಟಿ20 ಸರಣಿಗೂ ಆಸ್ಟ್ರೇಲಿಯಾ ತಂಡ ಬದಲಾವಣೆಗಳನ್ನು ಮಾಡಿದೆ. ಇಂಜುರಿಯಿಂದ ದೂರವಾಗಿದ್ದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೆ ತಂಡಕ್ಕೆ ಮರಳಿದ್ದು, ಅವರು ಮೊದಲ ಎರಡು ಪಂದ್ಯಗಳನ್ನು ಬಿಟ್ಟು ಉಳಿದ ಮೂರು ಪಂದ್ಯಗಳಲ್ಲಿ ಆಡಲಿದ್ದಾರೆ.
ಅದರ ಜೊತೆಗೆ ಬೆನ್ ದ್ವಾರ್ಶುಯಿಸ್, ಮಹ್ಲಿ ಬಿಯರ್ಡ್‌ಮನ್ ಮತ್ತು ಜೋಶ್ ಫಿಲಿಪ್ ಟಿ20 ತಂಡದಲ್ಲಿ ಹೊಸ ಸೇರ್ಪಡೆಗಳಾಗಿದ್ದಾರೆ. ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ತಂಡಕ್ಕೆ ಹೊಸ ಉತ್ಸಾಹವನ್ನು ತರಲಿದ್ದಾರೆ. ಇದರ ವಿರುದ್ಧವಾಗಿ, ವೇಗಿ ಜೋಶ್ ಹೇಜಲ್‌ವುಡ್ ಅವರನ್ನು ಮೊದಲ ಎರಡು ಟಿ20ಗಳ ಬಳಿಕ ವಿಶ್ರಾಂತಿಗೆ ಕಳುಹಿಸಲಾಗಿದ್ದು, ಸೀನ್ ಅಬಾಟ್ ಅವರನ್ನು ಮೊದಲ ಮೂರು ಪಂದ್ಯಗಳ ನಂತರ ಕೈಬಿಡಲಾಗಿದೆ.

