ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಗೆಲುವಿನ ಹಿರಿಮೆಯನ್ನು ಎತ್ತಿಹಿಡಿದ ಆಟಗಾರನಂತೆ ಮೊಹಮ್ಮದ್ ಸಿರಾಜ್ ಕಾಣಿಸಿಕೊಂಡಿದ್ದಾರೆ. ಅಂತಿಮ ದಿನದಲ್ಲಿ ತೀವ್ರ ದಾಳಿಗೆ ಇಳಿದ ಸಿರಾಜ್, ಇಂಗ್ಲೆಂಡ್‌ನ ಗೆಲುವಿನ ಕನಸಿಗೆ ಬ್ರೇಕ್ ಹಾಕಿದಷ್ಟೇ ಅಲ್ಲ, ಭಾರತಕ್ಕೆ ಅತ್ಯಂತ ಅಗತ್ಯವಾದ ಗೆಲುವನ್ನು ತರಲು ನೆರವಾದರು.
ಐದನೇ ಟೆಸ್ಟ್‌ನಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ ಸಿರಾಜ್, ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಮತ್ತು ನಿರ್ಣಾಯಕ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದು, ನಾಲ್ಕನೇ ದಿನದಾಟದವರೆಗೆ ಕೇವಲ 2 ವಿಕೆಟ್ ಪಡೆದಿದ್ದ ಅವರು, ಐದನೇ ದಿನದ ಆರಂಭದ ಕೆಲವೇ ಗಂಟೆಗಳಲ್ಲಿ 3 ಪ್ರಮುಖ ಆಟಗಾರರನ್ನು ಪೆವಿಲಿಯನ್‌ಗೆ ಮರಳಿಸಿದರು.
ಈ ಟೆಸ್ಟ್ ಸರಣಿಯ ಎಲ್ಲಾ ಐದು ಪಂದ್ಯಗಳಲ್ಲೂ ಭಾಗವಹಿಸಿದ ಸಿರಾಜ್, ಒಟ್ಟು 23 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಪರ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ವೇಗಿಯಾಗಿ ಚರಿತ್ರೆ ಬರೆದಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಕೇವಲ 2 ವಿಕೆಟ್ ಪಡೆದಿದ್ದ ಅವರು, ಎರಡನೇ ಪಂದ್ಯದಲ್ಲಿ 7, ಮೂರನೇ ಪಂದ್ಯದಲ್ಲಿ 4 ಮತ್ತು ಐದನೇ ಪಂದ್ಯದಲ್ಲಿ ಶ್ರೇಷ್ಠ 9 ವಿಕೆಟ್ ಪಡೆದು ಮಿಂಚಿದರು.
ಈ ಸಾಧನೆಯೊಂದಿಗೆ, ಮೊಹಮ್ಮದ್ ಸಿರಾಜ್ ಅವರ ಹೆಸರು ಇದೀಗ ಭಾರತೀಯ ಟೆಸ್ಟ್ ವೇಗಿಗಳ ಪೈಕಿ ಮೊದಲನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಒಟ್ಟು 185.3 ಓವರ್‌ಗಳನ್ನು ಬೌಲಿಂಗ್ ಮಾಡಿ 1113 ಎಸೆತಗಳ ಮೂಲಕ 23 ವಿಕೆಟ್ ಕಬಳಿಸಿದ್ದಾರೆ. ಇದು ಕೇವಲ ಒಂದು ಪ್ರವಾಸದಲ್ಲಿ ಸಾಧಿಸಿದ ಅತ್ಯುನ್ನತ ಪ್ರದರ್ಶನಗಳಲ್ಲಿ ಒಂದಾಗಿದೆ.
ಇದೇ ರೀತಿಯಲ್ಲಿ, ಸಿರಾಜ್ 2024-25ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ 20 ವಿಕೆಟ್ ಪಡೆದು ಗಮನ ಸೆಳೆದಿದ್ದರು.