ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಿರ್ಣಾಯಕ ಪಂದ್ಯವು ಲಂಡನ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪಂದ್ಯದ ನಾಲ್ಕನೇ ದಿನ ಭಾನುವಾರ ಮಳೆಯಿಂದಾಗಿ ಸಮಯಕ್ಕಿಂತ ಮೊದಲೇ ಆಟ ಅಂತ್ಯವಾಯಿತು. ದಿನದ ಅಂತ್ಯದ ವೇಳೆಗೆ ಇಂಗ್ಲೆಂಡ್ ತಂಡ ಆರು ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದ್ದು, ಗೆಲ್ಲಲು ಇನ್ನೂ 35 ರನ್ ಅಗತ್ಯವಿದೆ. ಕ್ರೀಸ್‌ನಲ್ಲಿ ಜೇಮೀ ಸ್ಮಿತ್ (2 ರನ್) ಮತ್ತು ಜೇಮೀ ಓವರ್ಟನ್ (0 ರನ್) ಅಜೇಯರಾಗಿದ್ದಾರೆ.
ನಾಲ್ಕನೇ ದಿನದಾಟವನ್ನು ಇಂಗ್ಲೆಂಡ್ ಒಂದು ವಿಕೆಟ್‌ಗೆ 50 ರನ್‌ಗಳೊಂದಿಗೆ ಆರಂಭಿಸಿತು. ಆರಂಭಿಕ ಆಟಗಾರರಾಗಿ ಬಂದ ಬೆನ್ ಡಕೆಟ್ ಮತ್ತು ನಾಯಕ ಓಲಿ ಪೋಪ್ ಉತ್ತಮ ಶರುವಾಗಿಸಿದರು. ಆದರೆ, ತಂಡದ ಮೊತ್ತ 82ಕ್ಕೆ ತಲುಪಿದಾಗ, ಡಕೆಟ್ (54 ರನ್) ಪ್ರಸಿದ್ಧ್ ಕೃಷ್ಣ ಎಸೆತಕ್ಕೆ ಔಟ್ ಆದರೂ. ಬಳಿಕ, ಮೊಹಮ್ಮದ್ ಸಿರಾಜ್ ತಮ್ಮ ಸುಸೂತ್ರ ಎಸೆತದ ಮೂಲಕ ಪೋಪ್‌ರನ್ನು ಎಲ್ಬಿಡಬ್ಲ್ಯೂ ಮಾಡಿದ್ರು. ಪೋಪ್ 27 ರನ್ ಗಳಿಸಿದರು.
ಅನಂತರ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ನಡುವೆ 195 ರನ್‌ಗಳ ಅತ್ಯುತ್ತಮ ಪಾಲುದಾರಿಕೆ ನಡೆದಿದ್ದು, ಇದು ಭಾರತ ವಿರುದ್ಧದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡಿಗೆ ಎರಡನೇ ಅತ್ಯಧಿಕ ಜೊತೆಯಾಟವಾಗಿದೆ. ಬ್ರೂಕ್ ತಮ್ಮ ಟೆಸ್ಟ್ ವೃತ್ತಿಜೀವನದ 10ನೇ ಶತಕವನ್ನು ಕೇವಲ 91 ಎಸೆತಗಳಲ್ಲಿ ಪೂರೈಸಿದರು. ಅವರು 111 ರನ್ ಗಳಿಸಿ ಔಟಾದರು. ಇವರ ಜೊತೆಗೆ ಬ್ಯಾಟಿಂಗ್ ಮಾಡುತ್ತಿದ್ದ ಜೋ ರೂಟ್ ತಮ್ಮ 39ನೇ ಟೆಸ್ಟ್ ಶತಕವನ್ನು ಪೂರೈಸಿದರು. ಭಾರತ ವಿರುದ್ಧದ ಅವರ 13ನೇ ಶತಕವಾಗಿದ್ದು, ಇಂಗ್ಲೆಂಡ್‌ನ ಮೈದಾನದಲ್ಲಿ ಅವರ 24ನೇ ಶತಕವಾಗಿದೆ. ಇದರೊಂದಿಗೆ, ಜೋ ರೂಟ್ ತವರು ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆಗೆ ಸೇರಿದ್ದಾರೆ.