ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ಹಾಗೂ ಭಾರತ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಟೀಂ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಸ್ಮೃತಿ ಮಂದಾನ ಜವಬ್ದಾರಿಯುತ ಬ್ಯಾಟಿಂಗ್ ಮಾಡಿದಲ್ಲದೆ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಸ್ಮೃತಿ ಮಂದಾನ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಪ್ರತಿಯೊಬ್ಬ ಇಂಗ್ಲೆಂಡ್ ಬೌಲರ್ಗೂ ಪಾಠ ಕಲಿಸಿದರು. ಕೇವಲ 27 ಎಸೆತಗಳಲ್ಲಿ 50 ರನ್ಗಳ ಗಡಿ ತಲುಪಿದ ಸ್ಮೃತಿ, ಅರ್ಧಶತಕದ ನಂತರ ವೇಗವಾಗಿ ರನ್ ಗಳಿಸಿ 51 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ತಮ್ಮ ಶತಕದ ಇನ್ನಿಂಗ್ಸ್ನಲ್ಲಿ ಸ್ಮೃತಿ 14 ಬೌಂಡರಿಗಳು ಮತ್ತು 3 ಸಿಕ್ಸರ್ಗಳನ್ನು ಬಾರಿಸಿದರು.
ಈ ಶತಕದೊಂದಿಗೆ ಸ್ಮೃತಿ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಭಾರತದ ಎರಡನೇ ಮಹಿಳಾ ಬ್ಯಾಟರ್ ಎಂಬ ದಾಖಲೆಯನ್ನು ಬರೆದರು. ಸ್ಮೃತಿಗೂ ಮೊದಲು ಈ ಸಾಧನೆಯನ್ನು ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮಾಡಿದ್ದರು.
210 ರನ್ ಕಲೆಹಾಕಿದ ಭಾರತ
ಈ ಪಂದ್ಯದಲ್ಲಿಭಾರತ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 210 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಮಂಧಾನ ಜೊತೆಗೆ, ಹರ್ಲೀನ್ ಡಿಯೋಲ್ ಕೂಡ ಸ್ಫೋಟಕ ಇನ್ನಿಂಗ್ಸ್ ಆಡಿ 23 ಎಸೆತಗಳಲ್ಲಿ 186.95 ಸ್ಟ್ರೈಕ್ ರೇಟ್ನಲ್ಲಿ 7 ಬೌಂಡರಿಗಳ ಸಹಿತ 43 ರನ್ ಕಲೆಹಾಕಿದರು.